ಇಸ್ಲಾಮಾಬಾದ್, ಅ.21(Daijiworld News/SS): ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಜುರಾ, ಶಾಹಕೋಟ್ ಮತ್ತು ನೌಶ್ರಿ ಕ್ಷೇತ್ರಗಳಲ್ಲಿ ಭಾರತೀಯ ಸೇನೆ ಅಪ್ರಚೋದಿತ ಕದನವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಮಹಾ ನಿರ್ದೇಶಕ ಮೊಹಮ್ಮದ್ ಫೈಸಲ್ ಖಂಡಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಲಾಂಚ್ ಪ್ಯಾಡ್'ಗಳನ್ನು ಗುರಿಯಾಗಿಟ್ಟುಕೊಂಡು ಭಾರತ ದಾಳಿ ನಡೆಸಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಯನ್ನು ಸ್ಪಷ್ಟವಾಗಿ ನಿರಾಕರಿಸಿರುವ ಪಾಕಿಸ್ತಾನ ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾ ಅವರಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ. ಭಾರತೀಯ ಸೇನಾಪಡೆಯಿಂದ ಅಪ್ರಚೋದಿತ ಮನಸೋಇಚ್ಛೆ ಫಿರಂಗಿ ಮತ್ತು ಗುಂಡಿನ ದಾಳಿ ನಡೆಸುತ್ತಿರುವುದರಿಂದ ಐವರು ನಾಗರಿಕರು ಮೃತಪಟ್ಟಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಫೈಸಲ್ ಭಾರತೀಯ ರಾಯಭಾರಿಗೆ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮತ್ತು ಕಾರ್ಯನಿರತ ಗಡಿಯಲ್ಲಿ ಭಾರತೀಯ ಸೇನಾಪಡೆ ನಿರಂತರವಾಗಿ ನಾಗರಿಕರ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ.