ಇಸ್ಲಮಾಬಾದ್, ಅ.23(Daijiworld News/SS): ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಿಒಕೆಗೆ ನುಗ್ಗಿ ಅಲ್ಲಿನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿದೆ. ಈ ವೇಳೆ ಪಾಕಿಸ್ತಾನದ ಕೆಲವು ಸೈನಿಕರೂ ಮೃತರಾಗಿದ್ದಾರೆ. ಹೀಗಾಗಿ ಪಾಕ್ ಭಾರತಕ್ಕೆ ಯುದ್ಧದ ಎಚ್ಚರಿಕೆಯನ್ನು ನೀಡಿದೆ.
ಪಾಕಿಸ್ತಾನದ ರೈಲ್ವೆ ಫೆಡರಲ್ ಮಂತ್ರಿ ಶೇಖ್ ರಶೀದ್ ಭಾರತಕ್ಕೆ ಯುದ್ಧ ಬೆದರಿಕೆ ಹಾಕಿದ್ದಾರೆ. “ಗಡಿ ನಿಯಂತ್ರಣಾ ರೇಖೆಯಲ್ಲಿ ಏನಾಗುತ್ತಿದೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಭಾರತ ಇದೇ ರೀತಿಯ ಕ್ರಮವನ್ನು ಅಲ್ಲಿ ಮುಂದುವರಿಸಿದರೆ ಪಾಕಿಸ್ತಾನ ಯುದ್ಧ ಮಾಡುವುದು ನಿಶ್ಚಿತ. ಆದರೆ ಅದು ಸಾಂಪ್ರದಾಯಿಕ ಯುದ್ಧವಾಗಿರುವುದಿಲ್ಲ. ಫಿರಂಗಿ, ಬಂದೂಕುಗಳನ್ನು ಒಳಗೊಂಡಿರುವ ಯುದ್ಧವಾಗಿರುವುದಿಲ್ಲ. ಬದಲಿಗೆ ಅದು ಅಣ್ವಸ್ತ್ರ ಯುದ್ಧವಾಗಿರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಶೇಖ್ ರಶೀದ್ ಭಾರತಕ್ಕೆ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಪಾಕಿಸ್ತಾನ ಅರ್ಧ ಕೆಜಿ ತೂಕದ ಅಣ್ವಸ್ತ್ರ ಬಾಂಬ್ಗಳನ್ನು ಹೊಂದಿದೆ ಎಂದು ಹೇಳಿದ್ದರು. ಅದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು.