ಫೀನಿಕ್ಸ್, ಅ 25 (Daijiworld News/MSP): ಎರಡು ಕಾರುಗಳ ನಡುವೆ ನಡೆದ ಅಪಘಾತವೂ, ದಂಪತಿ ಹಾಗೂ ಅವರ ಮಗುವಿನ ಜೀವ ಉಳಿಸಿದೆ. ಅಶ್ಚರ್ಯವಾದರೂ ಸತ್ಯ, ಈ ಘಟನೆಗೆ ಸಾಮಾಜಿಕ ಜಾಲತಾಣಿಗರು "ಭಗವಂತನ ಪವಾಡ" ಎಂದರೆ ಇನ್ನು ಕೆಲವರು "ಟೈಮ್ ಚೆನ್ನಾಗಿತ್ತು" ಎಂದು ಕಮೆಂಟ್ ಹಾಕಿದ್ದಾರೆ.
ಈ ಘಟನೆ ಅಮೇರಿಕಾದ ಅರಿಝೋನಾದ ಫೀನಿಕ್ಸ್ ನಲ್ಲಿ ನಡೆದಿದ್ದು, ಅಲ್ಲಿನ ಪೊಲೀಸರು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಿಗ್ನಲ್ ಬೀಳುತ್ತಿದ್ದಂತೆ ದಂಪತಿಗಳು ಮಗುವನ್ನು ಸ್ಟ್ರೋಲರ್ ನಲ್ಲಿ ತಳ್ಳಿಕೊಂಡು ರಸ್ತೆ ದಾಟಲು ಮುಂದಾಗುತ್ತಾರೆ. ಈ ವೇಳೆ ಉಳಿದೆಲ್ಲಾ ವಾಹನಗಳು ಸಿಗ್ನಲ್ ಬಳಿ ನಿಂತಿದ್ದರೆ, ಶರವೇಗದಿಂದ ಬಂದ ಕಾರೊಂದು ಇದ್ಯಾವುದಕ್ಕೆ ಕ್ಯಾರೇ ಅನ್ನದೇ ದಂಪತಿಗಳತ್ತ ಮುನ್ನುಗ್ಗಿದೆ. ಇದೇ ನಿಖರವಾದ ಕ್ಷಣದಲ್ಲಿ ಮತ್ತೊಂದು ಕಾರು ಶರವೇಗದಲ್ಲಿ ಬರುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆಯುವ ಮೂಲಕ ಎರಡು ಕಾರುಗಳಿಗೆ ಅಪಘಾತವಾಗಿ ಬೇರೆಡೆ ತಿರುಗಿ ನಿಲ್ಲುತ್ತದೆ. ಹೀಗಾಗಿ ಪವಾಡಶದೃಶ್ಯವಾಗಿ ಪಾದಾಚಾರಿ ದಂಪತಿಗಳು ಮಗುವಿನೊಂದಿಗೆ ಪಾರಾಗಿದ್ದಾರೆ.
ಎಡಭಾಗದಿಂದ ಸರಿಯಾದ ಸಮಯಕ್ಕೆ ಬಂದ ಕಾರನ್ನು ಚಾಲಕಿ ಶಾನೋನ್ ವಿವಾರ್ ಎಂಬವರು ಚಲಾಯಿಸುತ್ತಿದ್ದರು. ಅಪಘಾತದ ಬಳಿಕ ಪ್ರತಿಕ್ರಿಯಿಸಿದ ಶಾನೋನ್ ನಾವೆಲ್ಲರೂ ಸುರಕ್ಷಿತರಾಗಿದ್ದೇವೆ ಎನ್ನುವುದು ಸಂತೋಷ ಎಂದಿದ್ದಾರೆ. ಸಿಗ್ನಲ್ ಜಂಪ್ ಮಾಡಿದ ಕಾರಿನ ಚಾಲಕನನ್ನು ಎರ್ನೆಸ್ಟೋ ಒಟಾನೆಸ್ (28) ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭ ಈತ ಪಾನಮತ್ತನಾಗಿದ್ದು ಇತನನ್ನು ಪೊಲೀಸರು ಬಂಧಿಸಿದ್ದಾರೆ.