ರಷ್ಯಾ, ಅ 28 (Daijiworld News/MSP): ಪುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿರಬೇಕಾದ್ರೆ ಏಕಾಏಕಿ ಮ್ಯಾನ್ ಹೋಲ್ ಗೆ ಬಿದ್ದ ಮಗುವನ್ನು ತಾಯಿಯು ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿರುವ ಆಘಾತಕಾರಿ ಹಾಗೂ ಅಚ್ಚರಿಯ ಘಟನೆಯೊಂದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದಿದ್ದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಯಿಯು ತನ್ನ ಪುಟ್ಟ ಕಂದಮ್ಮನನ್ನು ಸ್ಟ್ರೋಲರ್ ನಲ್ಲಿ ಕುಳ್ಳಿರಿಸಿಕೊಂಡು ಫುಟ್ಪಾತ್ ಬದಿಯಲ್ಲಿ ಹೋಗುತ್ತಿದ್ದರು. ಇನ್ನೊಂದು ಮಗು ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಮಗು ಮ್ಯಾನ್ಹೋಲ್ ಮುಚ್ಚಳದ ಮೇಲೆ ನಡೆದ ತಕ್ಷಣ, ಮುಚ್ಚಳ ತೆರೆದು ಮಗು ನೋಡುನೋಡುತ್ತಿದ್ದಂತೆ ಒಳಕ್ಕೆ ಬಿದ್ದಿದೆ. ಇದನ್ನು ನೋಡಿದ ತಕ್ಷಣವೇ ತಾಯಿಯ ತನ್ನ ಪುಟ್ಟ ಮಗುವನ್ನು ಅಲ್ಲೇ ಬಿಟ್ಟು ಮ್ಯಾನ್ಹೋಲ್ ಬಳಿ ಬಂದು ಭಾರವಾದ ಮುಚ್ಚಳವನ್ನು ಎತ್ತಿ ಪಕ್ಕಕ್ಕೆ ಎಸೆಯುತ್ತಾರೆ. ಆ ಬಳಿಕ ಮ್ಯಾನ್ಹೋಲ್ ಒಳಗೆ ಮುಖ ಮಾಡಿ ಕೆಳಕ್ಕೆ ಜಾರುತ್ತಿದ್ದ ಮಗುವನ್ನು ಕೈಯಿಂದ ಹಿಡಿಕೊಳ್ಳುತ್ತಾರೆ. ಈ ವೇಳೆ ದಾರಿಹೋಕರೊಬ್ಬರು ಆಕೆಯ ನೆರವಿಗೆ ಧಾವಿಸಿ ಬಂದು ಮಗುವನ್ನು ಹೊರತೆಗೆಯಲು ಸಹಾಯ ಮಾಡುತ್ತಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೊಬ್ಬರು, " ನಾನು ಮ್ಯಾನ್ ಹೋಲ್ ಗಳಲ್ಲಿ ಕೆಲಸ ಮಾಡುತ್ತಿದ್ದೆ. ಅದರ ಮುಚ್ಚಳ ತುಂಬಾ ಭಾರವಾಗಿರುತ್ತದೆ. ಆದರೆ ಆ ತಾಯಿ ಆ ಮುಚ್ಚಳವನ್ನು ಕ್ಷಣ ಮಾತ್ರದಲ್ಲಿ ಎಸೆದರು" ಎಂದು ಬರೆದಿದ್ದಾರೆ.
ಇತರ ಕೆಲವು ನೆಟ್ಟಿಗರು ಭವಿಷ್ಯದ ಇಂತಹ ಅಪಾಯಗಳನ್ನು ತಪ್ಪಿಸಲು ಈ ರೀತಿಯ ಮುಚ್ಚಳವನ್ನು ಬದಲಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.