ಇಸ್ಲಾಮಾಬಾದ್, ಅ.30(Daijiworld News/SS): ಭಾರತ-ಪಾಕಿಸ್ಥಾನದ ನಡುವೆ ಕಾಶ್ಮೀರದ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಅನಿವಾರ್ಯವಾಗಿ ಯುದ್ದ ಮಾಡಬೇಕಾಗುತ್ತದೆ ಎಂದು ಪಾಕಿಸ್ಥಾನದ ಸಚಿವ ಆಲಿ ಅಮೀನ್ ಹೇಳಿದ್ದಾರೆ.
ಯಾವುದೇ ದೇಶ ಕಾಶ್ಮೀರದ ವಿಷಯವಾಗಿ ಭಾರತವನ್ನು ಬೆಂಬಲಿಸಿದರೆ ಅದರ ಮೇಲೆ ಕ್ಷಿಪಣಿ ದಾಳಿ ನಡೆಸಲಾಗುವುದು ಮತ್ತು ಅದನ್ನು ಪಾಕಿಸ್ಥಾನದ ಶತ್ರು ಎಂದು ಪರಿಗಣಿಸಲಾಗುವುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತವನ್ನು ಬೆಂಬಲಿಸುವ ದೇಶಗಳು ನಮ್ಮ ಶತ್ರುವಾಗಿ ಬದಲಾಗುತ್ತದೆ. ಆ ಕಾರಣದಿಂದ ಬಾರತವನ್ನು ಬೆಂಬಲಿಸುವ ದೇಶಗಳ ಮೇಲೂ ಕ್ಷಿಪಣಿ ಹಾರಿಸಬೇಕಾಗುತ್ತದೆ ಎಂದು ಕಾಶ್ಮೀರ ವ್ಯವಹಾರಗಳ ಸಚಿವ ಗಿಲ್ಗಿತ್ ಬಾಲ್ಟಿಸ್ಥಾನ್ ಅಲಿ ಅಮೀನ್ ಗಂಡಾಪುರ ಹೇಳಿದ್ದಾರೆ.
ಇದೀಗ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಭಾರತವು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ರದ್ದು ಮಾಡಿದ ನಂತರ ಪಾಕಿಸ್ಥಾನವು ಜಾಗತಿಕವಾಗಿ ಭಾರತವನ್ನು ದೂಷಿಸುತ್ತಾ ಬರುತ್ತಿದೆ.