ಯುನೈಟೆಡ್ ನೇಷನ್ಸ್, ಅ.31(Daijiworld News/SS): ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳಡಿಯಲ್ಲಿ ಏಪ್ರಿಲ್ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾಧವ್ ಗೆ ಮರಣದಂಡನೆ ಶಿಕ್ಷೆ ನೀಡಿತ್ತು. ಆದರೆ ಜಾಧವ್'ಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಿ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದ್ದು ಕುಲಭೂಷಣ್ ಜಾಧವ್ ಕೇಸಿನಲ್ಲಿ ಭಾರತಕ್ಕೆ ಸಿಕ್ಕ ಪ್ರಮುಖ ಜಯವಾಗಿತ್ತು.
ಇದೀಗ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದದಡಿ ಜವಾಬ್ದಾರಿಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿಯನ್ನು 193 ಸದಸ್ಯಗಳ ವಿಶ್ವಸಂಸ್ಥೆಗೆ ಸಲ್ಲಿಸಿದ ನ್ಯಾಯಾಧೀಶ ಯೂಸಫ್, ವಿಯೆನ್ನಾ ಒಪ್ಪಂದದ ವಿಧಿ 36ರಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತು ಒಪ್ಪಂದ ಉಲ್ಲಂಘಿಸಿದ್ದು ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.