ಕ್ಯಾಲಿಫೋರ್ನಿಯಾ, ನ 1 (Daijiworld News/MB): ವಿದ್ಯಾರ್ಥಿನಿಯೋರ್ವಳು ಶಾಲಾ ಐಡಿ ಕಾರ್ಡ್ ನಲ್ಲಿದ್ದ ಆತ್ಮಹತ್ಯೆ ತಡೆಗಟ್ಟುವ ಹಾಟ್ಲೈನ್ಗೆ ಡಯಲ್ ಮಾಡಿದಾಗ ಅದು ಸೆಕ್ಸ್ ಲೈನ್ ಗೆ ಕನೆಕ್ಟ್ ಆದ ಘಟನೆ ಕ್ಯಾಲಿಫೋರ್ನಿಯಾದ ಲಾನ್ಕಾಸ್ಟಾರ್ ಯುನಿಫೈಡ್ ಶಾಲೆಯಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಸ್ಕೂಲ್ ಒಂದರಲ್ಲಿ ನೀಡಲಾದ ವಿದ್ಯಾರ್ಥಿಗಳ ಗುರುತಿನ ಚೀಟಿಯ ಹಿಂಭಾಗದಲ್ಲಿ ಸೂಸೈಡ್ ಹೆಲ್ಪ್ ಲೈನ್ ನಂಬರ್ ಸೇರಿದಂತೆ ಹಲವು ತುರ್ತು ನಂಬರ್ಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಿತ್ತು. ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ ನಂಬರ್ಗಳನ್ನು ಮುದ್ರಿಸಲಾಗಿತ್ತು.
ಆದರೆ ಎಡವಟ್ಟು ಆಗಿದ್ದು ಇಲ್ಲಿಯೇ.. ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಯ ನಂಬರ್ ನಲ್ಲಿ ಒಂದು ಸಂಖ್ಯೆ ತಪ್ಪಾಗಿ ಮುದ್ರಣವಾಗಿದ್ದು, ಇದನ್ನು ನೋಡಿ ವಿದ್ಯಾರ್ಥಿನಿ ಡಯಲ್ ಮಾಡಿದಾಗ ಅದು ಸೆಕ್ಸ್ ಹಾಟ್ ಲೈನ್ಗೆ ಕನೆಕ್ಟ್ ಆಗಿದೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪ್ರತಿಕ್ರಿಯಿಸಿದ್ದು," ವಿದ್ಯಾರ್ಥಿಗಳಿಗೆ ನೀಡಲಾದ ಐಡಿಯಲ್ಲಿ ಸಹಾಯವಾಣಿ ಸಂಖ್ಯೆ ತಪ್ಪಾಗಿ ಮುದ್ರಣವಾಗಿದೆ. ವಿದ್ಯಾರ್ಥಿಗಳಿಗೆ ಈಗಾಗಲೇ ವಿತರಿಸಲಾಗಿರುವ ಐಡಿಕಾರ್ಡ್ ಗಳನ್ನು ಶಾಲೆ ಸಿಬ್ಬಂದಿಗಳು ಹಿಂಪಡೆದಿದ್ದಾರೆ. ವಿದ್ಯಾರ್ಥಿಗಳ ಗುರುತಿನ ಚೀಟಿಯನ್ನು ಇನ್ನೊಮ್ಮೆ ಮುದ್ರಿಸ ಬೇಕಾದ ಅನಿವಾರ್ಯತೆ ಉಂಟಾಗಿದೆ. ಶೀಘ್ರದಲ್ಲೆ ಹೊಸ ಐಡಿಕಾರ್ಡ್ ನೀಡಲಾಗುವುದು" ಎಂದು ತಿಳಿಸಿದ್ದಾರೆ.