ನವದೆಹಲಿ, ನ.06(Daijiworld News/SS): ಐಸಿಸ್ ಮತ್ತು ಅದರ ಎಲ್ಲ ಸಹಯೋಗಿ ಸಂಘಟನೆಗಳ ಮೇಲೆ ಅಮೆರಿಕ ಕಣ್ಣಿಟ್ಟಿದೆ ಎಂದು ಯುಎಸ್ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಮತ್ತು ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕಿ ರಸೆಲ್ ಟ್ರಾವರ್ಸ್ ಹೇಳಿದ್ದಾರೆ.
ಐಸಿಸ್-ಕೆ ಭಾರತದ ಮೇಲೆ ದಾಳಿ ನಡೆಸಲು ಸಂಚು ಮಾಡಿತ್ತು. ಐಸಿಸ್–ಕೆಯಲ್ಲಿ ಸುಮಾರು 4,000 ಮಂದಿ ಉಗ್ರರು ಇರಬಹುದು ಎಂದು ಶಂಕಿಸಲಾಗಿದೆ ಎಂದು ಅವರು ಅಮೆರಿಕದ ಸೆನೆಟ್ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಅವರು ಕಳೆದ ವರ್ಷ ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಗಿದೆ ಎಂದು ಈ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಗುಂಪಿನ ಸಾಮರ್ಥ್ಯದ ಬಗ್ಗೆ ಸೆನೆಟರ್ ಮ್ಯಾಗಿ ಹಾಸನ್'ಗೆ ಪ್ರತಿಕ್ರಿಯಿಸಿ ಟ್ರಾವರ್ಸ್ ಹೇಳಿದ್ದಾರೆ.
ಐಸಿಸ್-ಕೆ ಅಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳಿಗೆ ಮಾತ್ರವಲ್ಲ, ಯುಎಸ್ ತಾಯ್ನಾಡಿನ ಮೇಲೆ ಹೊಡೆಯುವ ವಿನ್ಯಾಸಗಳನ್ನು ಹೊಂದಿದೆ. ಐಸಿಸ್ ವಿರುದ್ಧ ಸಿರಿಯಾ ಮತ್ತು ಇರಾಕ್ನಲ್ಲಿ ಅಮೆರಿಕ ನಿರ್ಣಾಯಕ ಜಯಗಳಿಸಿದ್ದರೂ ಭಯೋತ್ಪಾದಕ ಸಂಘಟನೆಯು ಅಮೆರಿಕಕ್ಕೆ ಅಪಾಯ ಒಡ್ಡುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಾಗತಿಕವಾಗಿ 20 ಕ್ಕೂ ಹೆಚ್ಚು ಐಸಿಸ್ ಶಾಖೆಗಳಿವೆ. ಅವುಗಳಲ್ಲಿ ಕೆಲವು ಕಾರ್ಯಾಚರಣೆಗಳನ್ನು ನಡೆಸಲು ಡ್ರೋನ್ಗಳಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿವೆ. ಐಸಿಸ್-ಕೆ ಮತ್ತು ಐಸಿಸ್'ನ ಇತರ ಅಂಗ ಸಂಸ್ಥೆಗಳು ಯುಎಸ್ ತಾಯ್ನಾಡಿನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಹಸನ್ ಹೇಳಿದ್ದಾರೆ.