ಕತಾರ್, ನ 6 (Daijiworld News/MB): ಕತಾರ್ ನಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಬೃಹತ್ ರಂಗೋಲಿ ರಚಿಸುವುದರ ಮುಖಾಂತರ ಸಂಭ್ರಮಕ್ಕೆ ಮತ್ತಷ್ಟು ಮೆರೆಗು ನೀಡಿದ್ದಾರೆ.
ಕೊಲ್ಲಿ ದೇಶಗಳಲ್ಲಿ ದೀಪಾವಳಿ ಆಚರಿಸುವುದು ಹೊಸತೇನಲ್ಲ. ಆದರೆ ಕತಾರ್ ಎಂಬ ದೇಶದಲ್ಲಿ ಭಾರತೀಯರು ಈ ಬಾರಿ ದೀಪಾವಳಿ ಆಚರಿಸುತ್ತ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಸುಮಾರು 12 ಜನರ ತಂಡವು ಸತತವಾಗಿ 3 ದಿನಗಳ ಕಾಲ ಶ್ರಮಪಟ್ಟು, ಒಂದು ಬೃಹತ್ ಗಾತ್ರದ ರಂಗೋಲಿಯನ್ನು ರಚಿಸಿದ್ದಾರೆ. ಸ್ಥಳೀಯ ಆಕಾಶವಾಣಿ ’ರೇಡಿಯೋ ಆಲಿವ್ '106.3’ ಸಂಸ್ಥೆಯವರೊಂದಿಗೆ ಸೇರಿ ಭಾರತೀಯ ಸಮುದಾಯ ಹಿತನಿಧಿ (ಐ.ಸಿ.ಬಿ.ಎ.ಫ್)’ ಸಂಘದ ಜಂಟಿ-ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ದೊಡ್ಡ ರಂಗೋಲಿ ಹಾಗು ಇತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕತಾರಿನಲ್ಲಿ ವಾಸವಾಗಿರುವ ಭಾರತೀಯರಿಗೆ ಹಾಗು ಇತರೆ ದೇಶದವರ ಸಲುವಾಗಿ ಆಯೋಜಿಸಿದ್ದಾರೆ.
ಇವರು ಅಕ್ಟೋಬರ್ 25 ರಿಂದ 27 ರವರೆಗೆ ದೊಹಾದಲ್ಲಿನ ಮಿರ್ಕಾಬ್ ಮಾಲ್ ನಲ್ಲಿ ವಿವಿಧ ಕಾರ್ಯಕ್ರಗಳನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ 12 ಜನರು ಸೇರಿ 3 ದಿನಗಳಲ್ಲಿ ಈ ಬೃಹತ್ ರಂಗೋಲಿ ರಚಿಸಿದ್ದಾರೆ. ಮಾಲ್ ನಲ್ಲಿ ಸ್ಪರ್ಧೆಗಳು, ಮಿಟಾಯಿ ಮಳಿಗೆಗಳು, ಜಾದೂ ಪ್ರದರ್ಶನ ಹಾಗೂ ಉಲ್ಲಾಸಭರಿತ ಚಟುವಟಿಕೆಗಳು ಮಾಡಿ ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡಿದರು.