ಲಂಡನ್, ನ.07(Daijiworld News/SS): ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿದ್ದ ನೀರವ್ ಮೋದಿ ಮತ್ತೆ ಹೊಸದಾಗಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ಬ್ರಿಟನ್ ನ್ಯಾಯಾಲಯ ತಿರಸ್ಕರಿಸಿದೆ ಎನ್ನಲಾಗಿದೆ.
ಜಾಮೀನಿಗಾಗಿ ಹೊಸ ಅರ್ಜಿ ಸಲ್ಲಿಸಿದ್ದ ನೀರವ್ ರೂ 36.57 ಕೋಟಿ ಮೊತ್ತದ ಭದ್ರತಾ ಠೇವಣಿ ನೀಡುವುದಾಗಿ ತಿಳಿಸಿದ್ದರು. ಆದರೆ ನ್ಯಾಯಾಧೀಶೆ ಎಮ್ಮಾ ಆರ್ಬಥ್ನಾಟ್ ಈ ಮನವಿಯನ್ನು ತಿರಸ್ಕರಿಸಿದರು. ನೀರವ್ ಖಿನ್ನತೆಯಿಂದ ಬಳಲುತ್ತಿದ್ದರೂ, ಜಾಮೀನು ನೀಡಬೇಕಾದಂತಹ ವಿಷಯವೇನಲ್ಲ ಎಂದು ಅಭಿಪ್ರಾಯಪಟ್ಟರು.
ನೀರವ್ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಇರುವ ವೈದ್ಯಕೀಯ ದಾಖಲೆಗಳು ಭಾರತದಲ್ಲಿರುವ ಮಾಧ್ಯಮಗಳಿಗೆ ಹೇಗೆ ಸೋರಿಕೆ ಆಗಿದ್ದು ಎಂದು ನ್ಯಾ. ಎಮ್ಮಾ ಪ್ರಶ್ನಿಸಿದರು. ಈ ವೇಳೆ, ವೈದ್ಯಕೀಯ ದಾಖಲೆಗಳನ್ನು ಯಾರೂ ಭಾರತದ ಮಾಧ್ಯಮಗಳಿಗೆ ನೀಡಿಲ್ಲ. ಈ ಮಾಹಿತಿ ಸೋರಿಕೆಯಾಗಲು ಭಾರತದಲ್ಲಿರುವ ತನಿಖಾ ಸಂಸ್ಥೆಗಳೇ ಕಾರಣ ಎಂದು ನೀರವ್ ಪರ ವಕೀಲರು ಹೇಳಿದರು.
ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ನ್ಯಾಯಾಲಯದಲ್ಲಿ ನೀರವ್ ಮೋದಿ ತಾಳ್ಮೆ ಕಳೆದುಕೊಂಡಿದ್ದಾರೆ. ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಕೊಲ್ಲುತ್ತಾರೆ ಎಂಬುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಎರಡು ಬಾರಿ ಜೈಲಿನಲ್ಲಿ ಹೊಡೆಯಲಾಗಿದೆ ಎಂದು ನೀರವ್ ಮೋದಿ ಪರ ವಕೀಲರು ಹೇಳಿಕೊಂಡಿದ್ದಾರೆ.