ಪಾಕಿಸ್ತಾನ, ನ 10 (Daijiworld News/MB) : ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದದ್ದೆ ದೊಡ್ಡ ಘನ ಕಾರ್ಯ ಎಂಬಂತೆ ಪಾಕಿಸ್ತಾನ ಬಿಂಬಿಸಿಕೊಂಡಿದೆ. ಅಭಿನಂದನ್ ಹೋಲುವ ಪುತ್ಥಳಿಯನ್ನು ಇಲ್ಲಿನ ಕರಾಚಿಯಲ್ಲಿ ಮ್ಯೂಸಿಯಂ ಒಂದರಲ್ಲಿ ಇಟ್ಟು ಪಾಕಿಸ್ತಾನ ಮತ್ತೆ ಭಾರತವನ್ನು ಕೆಣಕಲು ಹೊರಟಿದೆ.
ಭಾರತದ ವಿರುದ್ಧ ಪಾಕಿಸ್ತಾನ ಮಾಡಿದ ತಂತ್ರಗಳ ಪ್ರಚಾರಕ್ಕಾಗಿ ಪಾಕಿಸ್ತಾನದ ಕರಾಚಿಯಲ್ಲಿನ ಮ್ಯೂಸಿಯಂನಲ್ಲಿ ಅಭಿನಂದನ್ ಹೋಲುವ ಪುತ್ಥಳಿ ಇಡಲಾಗಿದ್ದು, ಇದರ ಫೋಟೋವನ್ನು ಪಾಕಿಸ್ತಾನದ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಅನ್ವರ್ ಲೋಧಿ ಟ್ವೀಟ್ ಮಾಡಿದ್ದಾರೆ.
ಬಾಲಕೋಟ್ ದಾಳಿಗೆ ವಿರುದ್ಧವಾಗಿ ರಚಿಸಿದ್ದ ವಾಯುಪಡೆ ದಾಳಿಯಲ್ಲಿ ಮಿಗ್-21 ಬೈಸನ್ ವಿಮಾನದಲ್ಲಿ ಪಾಕಿಸ್ತಾನದ ಎಫ್-16 ವಿಮಾನವನ್ನು ಹಿಮ್ಮೆಟ್ಟಿಸುವಾಗ ಅಭಿನಂದನ್ ಅವರ ವಿಮಾನ ಪಾಕಿಸ್ತಾನ ಗಡಿ ದಾಟಿ ಅಲ್ಲಿ ನೆಲಕ್ಕೆ ಉರುಳಿತ್ತು. ನಂತರ ಅಭಿನಂದನ್ ಅವರನ್ನು ಸೆರೆ ಹಿಡದ ಪಾಕಿಸ್ತಾನ ಎರಡು ದಿನ ಕಳೆದು ಭಾರತಕ್ಕೆ ಹಿಂದಕ್ಕೆ ಕಳುಹಿಸಿತ್ತು.
ಈ ಟ್ವೀಟ್ ನಲ್ಲಿ ‘ಪಿ.ಎ.ಎಫ್ ಮ್ಯೂಸಿಯಂನಲ್ಲಿ ಅಭಿನಂದನ್ ಹೋಲುವ ಪುತ್ಥಳಿ ಪ್ರದರ್ಶನ ಮಾಡಿದ್ದಾರೆ. ಆದರೆ ಆ ಪುತ್ಥಳಿಯ ಕೈಯಲ್ಲಿ ಒಂದು ಕಪ್ ಅದ್ಭುತ ಚಹಾ ಇರುತ್ತಿದ್ದರೆ ಇನ್ನೂ ಕುತೂಹಲಕಾರಿಯಾಗಿರುತಿತ್ತು’ ಎಂದು ಹೇಳಿದ್ದಾರೆ.
ವಾಯುದಾಳಿ ನಡೆದು ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದ್ದಾಗ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಅಭಿನಂದನ್ ಅವರು ಚಹಾ ಸೇವಿಸುತ್ತಿದ್ದರು.