ಇಸ್ಲಾಮಾಬಾದ್, ನ.11(Daijiworld News/SS): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್'ಗೆ ಮೌಲಾನಾ ಫಜ್ಲೂರ್ ರೆಹಮಾನ್ ನೇತೃತ್ವದ ವಿರೋಧ ಪಕ್ಷದ ನಾಯಕರು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದು 48 ಗಂಟೆಗಳ ಸಮಯಾವಕಾಶವನ್ನು ನೀಡಿದ್ದಾರೆ ಎನ್ನಲಾಗಿದೆ.
ಬಲಪಂಥೀಯ ಜಮೈತ್-ಉಲೆಮಾ-ಇ-ಇಸ್ಲಾಮ್ ಫಜ್ಲ್ (ಜೆಯುಐ-ಎಫ್) ನಾಯಕ ಬೃಹತ್ ಪ್ರತಿಭಟನೆಯ ಮುಂಚೂಣಿ ವಹಿಸಿದ್ದು ಇದನ್ನು ಆಜಾದಿ ಮೆರವಣಿಗೆ ಎಂದು ಕರೆದಿದ್ದು ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಇನ್ನು ಎರಡು ದಿನಗಳಲ್ಲಿ ಹೊಸ ದಿಕ್ಕನ್ನು ಪಡೆಯಲಿದೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕರು, ಪಾಕ್ ಪ್ರಧಾನಿ ಇಮ್ರಾನ್ ಖಾನ್ 2018ರ ಸಾರ್ವತ್ರಿಕ ಚುನಾವಣೆಯನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಸಾವಿರಾರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ಇಮ್ರಾನ್ ಖಾನ್ ಅವರು ರಾಜೀನಾಮೆ ಸಲ್ಲಿಸದೆ ಸರ್ಕಾರದ ಮಧ್ಯವರ್ತಿಗಳು ಮಾತುಕತೆಗೆ ಬರುವುದು ಬೇಡ ಎಂದು ತಿಳಿಸಿದ್ದಾರೆ.