ವಾಷಿಂಗ್ಟನ್, ನ 11 (Daijiworld News/MB): ಹೃತಿಕ್ ನನ್ನು ಇಷ್ಟಪಟ್ಟದಕ್ಕೆ ಪತ್ನಿ ಮೇಲೆ ಹೊಟ್ಟೆಕಿಚ್ಚು ಪಟ್ಟು ಆಕೆಯನ್ನು ಚಾಕುವಿನಿಂದ ಇರಿದು ಕೊಂದು ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಡೋನೆ ದೊಜೋಯ್ (27) ಎಂದು ಗುರುತಿಸಲಾಗಿದ್ದು, ಆಕೆ ಓಝೋನ್ ರಸ್ತೆಯಲ್ಲಿರುವ ಜೆಮಿನಿ ಅಲ್ಟ್ರಾ ಲಾಂಜ್ನಲ್ಲಿ ಕೆಲಸ ಮಾಡುತ್ತಿದ್ದು, ಇದು ಪತಿ ದಿನೇಶ್ವರ್ ಬುದ್ಧಿದತ್ (33) ಗೆ ಇಷ್ಟವಿರಲಿಲ್ಲ. ಆಕೆ ನೋಡಲು ಸುಂದರವಾಗಿದ್ದು, ಉತ್ತಮ ಸಂಪಾದನೆ ಮಾಡುತ್ತಿದ್ದಳು. ಇದರಿಂದ ಹೊಟ್ಟೆಕಿಚ್ಚು ಪಟ್ಟಿದ್ದಾನೆ.
‘ದಿನೇಶ್ವರ್ ಡೋನೆ ಯನ್ನು ಅತೀವವಾಗಿ ಪ್ರೀತಿಸುತ್ತಿದ್ದು ಆಕೆ ಬೇರೆ ಯಾರನ್ನು ಇಷ್ಟಪಡುವುದನ್ನು ಸಹಿಸುತ್ತಿರಲಿಲ್ಲ. ಡೋನೆ ತನ್ನ ನೆಚ್ಚಿನ ನಟ ಹೃತಿಕ್ ರೋಷನ್ ನ ಹಾಡು ಸಿನೆಮಾಗಳನ್ನು ನೋಡಿದರೆ ಚಾನೆಲ್ ಅನ್ನೆ ಬದಲಾಯಿಸುತ್ತಿದ್ದ ’ಎಂದು ಡೋನೆಯ ಸಹೋದ್ಯೋಗಿ ಮಾಲಾ ರಾಮ್ದಾನಿ ತಿಳಿಸಿದ್ದಾರೆ.
ಭಾರತೀಯ ಮೂಲದವರಾದ ಡೋನೆ ಹಾಗೂ ದಿನೇಶ್ವರ್ ಓಝೋನ್ ಪಾರ್ಕಿನ ವೈಟ್ಲಾ ಸ್ಟ್ರೀಟ್ನಲ್ಲಿರುವ ಆಲ್ಬರ್ಟ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಎರಡು ವಾರಗಳ ಹಿಂದೆ ಡೋನೆ ಬೇರೆ ಕಡೆ ವಾಸಿಸುತ್ತಿದ್ದಳು. ನವೆಂಬರ್ 8 ರ ಶುಕ್ರವಾರ ಡೋನೆ ತನ್ನ ಪತಿಯೊಂದಿಗೆ ಸಿನೆಮಾ ನೋಡಲು ಹೋಗುವ ಸಲುವಾಗಿ ಓಝೋನ್ ಪಾರ್ಕಿನ ಅಪಾರ್ಟ್ಮೆಂಟ್ಗೆ ಹೋಗಿದ್ದು, ಆ ಸಂದರ್ಭದಲ್ಲಿ ಪತಿ ದಿನೇಶ್ವರ್ ಚಾಕುವಿನಿಂದ ಆಕೆಗೆ ಇರಿದು ಕೊಂದಿದ್ದಾನೆ.
ಅಷ್ಟು ಮಾತ್ರವಲ್ಲದೇ ತಾನು ಡೋನೆಯನ್ನು ಕೊಂದಿರುವುದಾಗಿ ಡೊನ್ನೆಯ ಸಹೋದರಿಗೆ ಮೆಸೇಜ್ ಮಾಡಿ, ಕೀ ಹೂ ಕುಂಡದಲ್ಲಿದೆ ಎಂದು ಹೇಳಿ ಮನೆಯಿಂದ ಹೊರಟು ಹೋಗಿದ್ದಾನೆ.
ಸಂಜೆ 7.30ಕ್ಕೆ ಡೋನೆ ಸಹೋದರಿ ಸ್ಥಳಕ್ಕೆ ಹೋಗಿದ್ದು ಮನೆಯೊಳಗೆ ಹೋಗಿ ಮೃತದೇಹ ಕಂಡು ತಕ್ಷಣ ಪೊಲೀಸರಿಗೆ ಕರೆ ಮಾಡಿ ಕೊಲೆ ನಡೆದ ವಿಷಯ ತಿಳಿಸಿದ್ದಾರೆ.
ಪೊಲೀಸರು ಹೆಲಿಕಾಫ್ಟರ್ ಮೂಲಕ ದಿನೇಶ್ವರ್ ನ್ನು ಹುಡುಕಿದಾಗ ಆತ ಹೊವಾರ್ಡ್ ಬೀಚಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.
ಆಗಸ್ಟ್ ತಿಂಗಳಲ್ಲಿ ಡೋನೆಯ ಕತ್ತು ಹಿಸಿಕಿ ಹತ್ಯೆ ಮಾಡಲು ಯತ್ನಿಸಿದಕ್ಕಾಗಿ ದಿನೇಶ್ವರ್ ನನ್ನು ಬಂಧಿಸಲಾಗಿತ್ತು.