ರಿಯಾದ್, ಅ.14 (DaijiworldNews/AA): ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾದಲ್ಲಿನ ವಿಶ್ವದ ಅತಿ ದೊಡ್ಡ ತೈಲ ಕಂಪನಿ ಅರಾಮ್ಕೊದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಹೌತಿಗಳು ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿರುವ ವಿಶ್ವದ ಅತಿದೊಡ್ಡ ತೈಲ ಕಂಪನಿ ಅರಾಮ್ಕೊ ಆಡಳಿತ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಪರಿಣಾಮ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸೌದಿ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಸೌದಿ ನೇತೃತ್ವದ ಸಮ್ಮಿಶ್ರ ಪಡೆಗಳು, ಯೆಮನ್ನ ರಾಜಧಾನಿ ಸನಾ ಸೇರಿದಂತೆ ಹೌತಿ ನಿಯಂತ್ರಿತ ಪ್ರದೇಶಗಳ ಮೇಲೆ ಮಂಗಳವಾರ ರಾತ್ರಿ ವಾಯುದಾಳಿ ನಡೆಸಿವೆ.
ಸೌದಿ ರಾಜಧಾನಿ ರಿಯಾದ್ ಮತ್ತು ಪೂರ್ವ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ಹೌತಿಗಳು ಉಡಾಯಿಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಡ್ರೋನ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ. ಆದರೆ, ರಿಯಾದ್ನ ಜನವಸತಿ ಪ್ರದೇಶಗಳಲ್ಲಿ ಕ್ಷಿಪಣಿಗಳ ಅವಶೇಷಗಳು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ನಾಗರಿಕ ರಕ್ಷಣಾ ಇಲಾಖೆ ಹೇಳಿದೆ.
ಇನ್ನು ದಾಳಿಗೂ ಮುನ್ನವೇ ಸನಾದ ನಾಗರಿಕರಿಗೆ ಸ್ಥಳ ತೆರವು ಮಾಡುವಂತೆ ಸೌದಿ ಪಡೆಗಳು ಎಚ್ಚರಿಕೆ ನೀಡಿದ್ದವು. ದಾಳಿಯ ಭೀತಿಯಿಂದಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ರಿಯಾದ್ ವಿಮಾನ ನಿಲ್ದಾಣದಿಂದ ದೇಶದ ಇತರ ಸುರಕ್ಷಿತ ವಿಮಾನ ನಿಲ್ದಾಣಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಕ್ಟೋಬರ್ 8 ರಿಂದ ಸೌದಿ ಅರೇಬಿಯಾದಿಂದ ಹೊರಡುವ ಶೇ. 41 ರಷ್ಟು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.