ಬರ್ದಿಯಾ, ನ.12(Daijiworld News/SS): ಚೀನಾ ನೇಪಾಳದ ಭೂ ಪ್ರದೇಶಗಳನ್ನು ಆಕ್ರಮಿಸುತ್ತಿದ್ದು, ಇದರ ವಿರುದ್ಧ ನೇಪಾಳಿಗರು ಸಿಡಿದೆದ್ದಿದ್ದಾರೆ. ಮಾತ್ರವಲ್ಲ, ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾದ ವಿರುದ್ಧ ನೇಪಾಳದಲ್ಲಿ ಪ್ರತಿಭಟನೆಗಳು ಶುರುವಾಗಿದ್ದು, ಚೀನಾ ವಿರೋಧಿ ಪ್ಲಕಾರ್ಡ್ಗಳು, ಬ್ಯಾನರ್'ಗಳನ್ನು ಹೊಂದಿದ್ದ ಪ್ರತಿಭಟನಾಕಾರರು ಚೀನಾ ವಿರೋಧಿ ಘೋಷಣೆಗಳು ಕೂಗಿದ್ದಾರೆ. ಈ ವೇಳೆ “ಗೋ ಬ್ಯಾಕ್ ಚೀನಾ, ನಮ್ಮ ಭೂ ಭಾಗವನ್ನು ವಾಪಸ್ ನೀಡು” ಎಂದು ಪ್ರತಿಭಟಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ನೇಪಾಳದ ಸರ್ವೇ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ನೇಪಾಳದ 36 ಹೆಕ್ಟೇರ್ ಭೂಮಿ ಚೀನಾ ವಶದಲ್ಲಿರುವುದು ಬಹಿರಂಗವಾಗಿದೆ. ಹುಮ್ಲಾ ಜಿಲ್ಲೆಯಲ್ಲಿ ಮತ್ತು ಕರ್ನಾಲಿ ಜಿಲ್ಲೆಯಲ್ಲಿ ಅತಿಕ್ರಮ ನಡೆದಿದೆ. ಸರ್ಕಾರದ ಮಾಹಿತಿಯ ಪ್ರಕಾರ, ನೇಪಾಳವು ಚೀನಾಕ್ಕೆ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ.
ಇದೀಗ, ನೇಪಾಳಿಗರಿಗೆ ಚೀನಾದ ಗುಟ್ಟು ಗೊತ್ತಾಗಿದ್ದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.