ಒಮನ್ , ನ 13 (Daijiworld News/MSP): ಒಮನ್ ನ ಮಸ್ಕತ್ ನಗರದಲ್ಲಿ ನೀರಿನ ಕೊಳವೆ ಮಾರ್ಗ ಜೋಡಣೆ ಯೋಜನೆಗೆಂದು ಗುಂಡಿ ಅಗೆಯುತ್ತಿದ್ದ ಆರು ಮಂದಿ ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ.
ಮಸ್ಕತ್ ನ ಸೀಬ್ ಪ್ರದೇಶದಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿದೆ. ಸುಮಾರು 14 ಮೀಟರ್ ಆಳದಷ್ಟು ಮಣ್ಣು ಅಗೆದು, ಕಾಮಗಾರಿ ಕೈಗೊಳ್ಳಲಾಗಿತ್ತು. ಭಾನುವಾರ ಸುರಿದ ಭಾರೀ ಮಳೆಯ ಪರಿಣಾಮ ಕಾರ್ಮಿಕರಿದ್ದ ಸ್ಥಳಕ್ಕೆ ನೀರು ನುಗ್ಗಿತ್ತು. ರಕ್ಷಣಾ ಸಿಬ್ಬಂದಿ ಧಾವಿಸುವಷ್ಟರಲ್ಲಿ ನೀರು ಹಾಗೂ ಕೆಸರಿನಲ್ಲಿ ಸಿಲುಕಿ ಕಾರ್ಮಿಕರು ಅಲ್ಲಿಯೇ ಸಮಾಧಿಯಾಗಿದ್ದಾರೆ.
ಮಣ್ಣಿನಡಿ ಹೂತು ಹೋದ ಶವಗಳನ್ನು ಮೇಲೆತ್ತಲು ರಕ್ಷಣಾ ತಂಡಗಳು 12 ಗಂಟೆಗಳ ಕಾಲ ಶ್ರಮಿಸಬೇಕಾಯಿತು ಎಂದು ಮಸ್ಕತ್ ಡೈಲಿ ವರದಿ ಮಾಡಿದೆ. ಮೃತರ ಗುರುತು ಪತ್ತೆಗಾಗಿ ಭಾರತೀಯ ದೂತವಾಸ ಕಚೇರಿ ಒಮನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡುವುದಾಗಿ ರಾಯಭಾರ ಕಚೇರಿ ಹೇಳಿದೆ.
ಈ ಮಧ್ಯೆ ಒಮನ್ ಟ್ರೇಡ್ ಯುನಿಯನ್ ಜನರಲ್ ಫೆಡರೇಷನ್ , ಕಾರ್ಮಿಕ ಸುರಕ್ಷತೆ ವಿಚಾರದಲ್ಲಿ ಕಂಪನಿ ನಿರ್ಲಕ್ಷ್ಯ ಭಾವನೆ ಸಾವಿಗೆ ಕಾರಣ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದೆ.