ಮಾಸ್ಕೋ, ಡಿ 4 (Daijiworld News/MSP): ಬೆಕ್ಕುಗಳ ಚೆಲ್ಲಾಟ ನೋಡುವುದೇ ಚೆಂದ. ಆದರೆ ಆ ಮನೆ ಮಂದಿ ಪ್ರೀತಿಯಿಂದ ಸಾಕಿದ್ದ ಮುದ್ದು ಬೆಕ್ಕು ಮನೆಯ ನಂದಾದೀಪದಂತಿದ್ದ ಮುದ್ದು ಕಂದಮ್ಮನನ್ನು ಕೊಂದಿದೆ. ಈ ಘಟನೆ ನಡೆದಿದ್ದು, ಉಕ್ರೇನ್ ನ ಕೀವ್ ನಗರದ ಹೊರವಲಯದಲ್ಲಿರುವ ಪುಟ್ಟ ಗ್ರಾಮದಲ್ಲಿ.
ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದ್ದ ತಾಯಿ ಸ್ನೇಝಾನಾ(22) ಮನೆಯ ಹಿತ್ತಲಲ್ಲಿ ಮನೆಕೆಲಸದಲ್ಲಿ ಮಾಡುತ್ತಿದ್ದಳು. ಈ ವೇಳೆ ಅದೇ ಕೊಠಡಿಯಲ್ಲಿ ಬೆಕ್ಕುಗಳೆರಡು ಆಟವಾಡಿಕೊಂಡಿದ್ದವು. ಈ ವೇಳೆ ಒಂದು ಬೆಕ್ಕು ಮಲಗಿದ್ದ 9 ತಿಂಗಳ ಮಗುವಿನ ಮುಖದ ಮೇಲೆ ಮಲಗಿ ವಿರಮಿಸತೊಡಗಿತು. ಸ್ವಲ್ಪ ಹೊತ್ತಿನ ಬಳಿಕ ಮಗುವಿನ ಬಳಿ ಬಂದ ತಾಯಿ ಆ ದೃಶ್ಯವನ್ನು ಕಂಡು ಗಾಬರಿ ಬೆಕ್ಕು ಓಡಿಸಿ ಮಗುವನ್ನು ಎತ್ತಿಕೊಂಡಾಗ ಮಗು ನಿಶ್ಚಲವಾಗಿತ್ತು.
ಬೆಕ್ಕು ಮುಖದ ಮೇಲೆ ಮಲಗಿದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು. ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದರೂ ಮಗು ತೊಟ್ಟಿಲಲ್ಲೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು. ಮಗುವಿನ ಮುಖದ ಮೇಲೆ ಬೆಕ್ಕು ಮಲಗಿದ್ದರಿಂದ ಉಸಿರುಗಟ್ಟಿ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು.
ಮನೆಯಲ್ಲಿ ಸಾಕಿದ್ದ ಮುದ್ದಿನ ಬೆಕ್ಕುಗಳಿಂದ ಮಗು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆ ವರದಿಯಾಗಿದ್ದು, 2000 ಡಿಸೆಂಬರ್ ನಲ್ಲಿ ಕಿಂಗ್ಸ್ಟೈಟ್ಗಾನ್ ಪ್ರದೇಶದಲ್ಲಿ ಆರು ವಾರಗಳ ಮಗು ಮಲಗಿದ್ದಾಗ ಅದರ ಮೇಲೆ ಬೆಕ್ಕು ಕುಳಿತ ಪರಿಣಾಮ ಮಗು ಮೃತಪಟ್ಟಿತ್ತು. ಇದೇ ರೀತಿ ರಷ್ಯಾದ ಜ್ಲಟೋಸ್ಟ್ ನಲ್ಲೂ ಒಂದು ತಿಂಗಳ ಮಗು ಸಾವನ್ನಪ್ಪಿತ್ತು.