ಆಫ್ರಿಕಾ, ಡಿ 17 (Daijiworld News/MB) : ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ವಾಣಿಜ್ಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ 20 ಭಾರತೀಯರನ್ನು ಕಡಲ್ಗಳ್ಳರು ಅಪಹರಣ ಮಾಡಿದ ಘಟನೆ ಭಾನುವಾರ ನಡೆದಿದೆ.
ಹಾಂಕಾಂಗ್ ಮೂಲದ ಹಡಗಿನಲ್ಲಿದ್ದ 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ನೈಜೀರಿಯಾ ಕರಾವಳಿಯಲ್ಲಿ ಅಪಹರಿಸಿದ 10 ದಿನಗಳಲ್ಲೇ ಅಂಥಹ ಮತ್ತೊಂದು ಘಟನೆ ವರದಿಯಾಗಿದ್ದು ಭಾರತ ಸರಕಾರ ಈ ವಿಚಾರವನ್ನು ನೈಜೀರಿಯಾ ಸರಕಾರದ ಗಮನಕ್ಕೆ ತಂದಿದೆ.
"ಭಾನುವಾರ ಎಂಟಿ ಡ್ಯೂಕ್ ಹಡಗಿನಲ್ಲಿದ್ದ 20 ಮಂದಿ ಭಾರತೀಯ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಣ ಮಾಡಿರುವುದು ಆತಂಕಕಾರಿ ಘಟನೆಯಾಗಿದೆ. ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ನೈಜೀರಿಯಾ ಅಧಿಕಾರಿಗಳು ಮತ್ತು ಇತರ ಹಕ್ಕುದಾರರ ಬಳಿ ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
"ಈ ಒಂದು ವರ್ಷ ಭಾರತೀಯನ್ನೆ ಗುರಿಮಾಡಿ ಅಪಹರಣ ಮಾಡಿದ ಘಟನೆ ಇದು ಮೂರನೆ ಬಾರಿ ನಡೆದಿದೆ. ಈ ಘಟನೆಯ ಕುರಿತು ನೈಜೀರಿಯಾ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಷ್ಟು ಮಾತ್ರವಲ್ಲದೇ ಇತರ ನೆರೆ ರಾಷ್ಟ್ರಗಳ ಗಮನಕ್ಕೂ ತರಲಾಗಿದೆ" ಎಂದು ಹೇಳಿದ್ದಾರೆ.