ವಾಷಿಂಗ್ಟನ್, ಡಿ 19 (Daijiworld News/PY) : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಂಡನೆಗೆ ಒಳಗಾಗಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ಧಾರೆ ಎಂಬ ಆಪಾದನೆಗೆ ಒಳಗಾದ ಡೊನಾಲ್ಡ್ ಟ್ರಂಪ್ ಅವರನ್ನು ಅಮೇರಿಕಾದ ಸಂಸತ್ತಿನ ಕೆಳಮನೆಯಾದ ಹಾಗೂ ಡೆಮಾಕ್ರಟ್ ಬಹುಮತವಿರುವ ಜನಪ್ರತಿನಿಧಿ ಸಭೆಯು ಬುಧವಾರ ವಾಗ್ದಂಡನೆಗೆ ಒಳಪಡಿಸಿದೆ.
ಸಂಸತ್ತಿನ ಮೇಲ್ಮನೆಯಾದ ಸೆನಟ್ ನಲ್ಲಿಯೂ ಮುಂದಿನ ತಿಂಗಳು ವಾಗ್ದಂಡನೆ ಪ್ರಕ್ರಿಯೆಯ ಮೇಲೆ ಮತದಾನ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ನ ನೇತೃತ್ವದಲ್ಲಿರುವ ರಿಪಬ್ಲಿಕ್ ಪಕ್ಷಕ್ಕೆ ಬಹುಮತವಿರುವ ಕಾರಣ ವಾಗ್ದಂಡನೆ ಪ್ರಕ್ರಿಯೆಗೆ ಸೋಲಬಹುದು ಎನ್ನಲಾಗಿದೆ. ಹೀಗಾಗಿ ಟ್ರಂಪ್ ಅವರು ಪದಚ್ಯುತಿಯಾಗುವ ಸಾಧ್ಯತೆಗಳಿಲ್ಲ.
ಟ್ರಂಪ್ ಅವರಿಗೆ ವಾಗ್ದಂಡನೆ ನೀಡುವ ಕುರಿತಾಗಿ ಬುಧವಾರ ಜನಪ್ರತಿನಿಧಿ ಸಭೆಯು ಸುಮಾರು 6 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಗಿದೆ. ಬಳಿಕ ವಾಗ್ದಂಡನೆ ಕುರಿತಂತೆ ಮತ ಹಾಕಲಾಯಿತು. 435 ಸದಸ್ಯರ ಜನಪ್ರತಿನಿಧಿ ಸಭೆಯಲ್ಲಿ ವಾಗ್ದಂಡನೆ ವಿಧಾನವು ಮುಂದುವರಿಯಲು 216 ಮತಗಳ ಅಗತ್ಯವಿದೆ.
ಜನಪ್ರತಿನಿಧಿ ಸಭೆಯು ಛೀಮಾರಿ ಹಾಕಿದ ಕಾರಣಕ್ಕಾಗಿ ಟ್ರಂಪ್ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ತಮ್ಮ ಎದುರಾಳಿಯಾದ ಜೋ ಬಿಡೆನ್ ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡಬಹುದಾದ ಸಂಶಯವನ್ನು ತಿಳಿದ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರ ಮೇಲೆ ತೀವ್ರವಾದ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಕಾರಣಕ್ಕಾಗಿ ಉಕ್ರೇನ್ ಸೇನಾ ಕಾರ್ಯಾಚರಣೆಗಾಗಿ ಅಮೇರಿಕಾದಿಂದ ಬಿಡುಗಡೆಯಾದ 400 ಮಿಲಿಯನ್ ಡಾಲರನ್ನು ಟ್ರಂಪ್ ತಡೆಹಿಡಿದಿದ್ದಾರೆ ಎನ್ನಲಾಗುತ್ತಿದೆ.