ನವದೆಹಲಿ, ಡಿ 22 (Daijiworld News/PY) : ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ವಾಣಿಜ್ಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ 20 ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದು, 18 ಮಂದಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 17ರಂದು ಹಾಂಕಾಂಗ್ ಮೂಲದ ವಾಣಿಜ್ಯ ಹಡಗಿನಲ್ಲಿ ಸರಕುಸಾಗಣೆ ಮಾಡುತ್ತಿದ್ದ ವೇಳೆ ನೌಕೆಯಲ್ಲಿದ್ದ 20 ಭಾರತೀಯರನ್ನು ಆಫ್ರಿಕಾದ ಪಶ್ಚಿಮ ಕರಾವಳಿ ತೀರದ ಬಳಿ ಕಡಲ್ಗಳ್ಳರು ದಾಳಿ ನಡೆಸಿ, ಅಪಹರಣ ಮಾಡಿದ್ದರು.
ಈ ಘಟನೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆಯು ನೈಜಿರಿಯಾದಲ್ಲಿರುವ ಭಾರತ ಮೂಲದ ಸಂಘಟನೆಗಳನ್ನು ಸಂಪರ್ಕಿಸಿ ಅವರ ಮೂಲಕ ಕಡಲ್ಗಳ್ಳರೊಂದಿಗೆ ಸಂಧಾನ ಮಾಡಿಕೊಂಡ ಬಳಿಕ ಇದೀಗ ಕಡಲ್ಗಳ್ಳರು 18 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಭಾರತವು ಈ ಘಟನೆಯ ಬಗ್ಗೆ ನಡೆಸಿದ ಕಾರ್ಯಾಚರಣೆಗೆ ಆಫ್ರಿಕಾ ಸರ್ಕಾರ ಕೂಡ ನೆರವು ನೀಡಿದ್ದು, ಬಿಡುಗಡೆಯಾದ ಭಾರತೀಯರ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.