ದಾಮನ್, ಡಿ 23 (Daijiworld News/MB) :ಫೇಸ್ಬುಕ್ನಲ್ಲಿ ಧರ್ಮನಿಂದನೆ ಮತ್ತು ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಕುಂದಾಪುರ ಮೂಲದ ವ್ಯಕ್ತಿ ಸೌದಿ ಅರೇಬಿಯಾದ ದಾಮನ್ನಲ್ಲಿ ಬಂಧನಕೊಳಗಾಗಿದ್ದಾರೆ.
ಕುಂದಾಪುರ ಮೂಲದ ಹರೀಶ್ ಬಂಗೇರಾ ಎಂಬವರು ದಾಮೇನ್ನಲ್ಲಿ ಎಸಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಡಿ.೨೧ರಂದು ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾದ ಕುರಿತು ಧರ್ಮನಿಂದನೆ ಮಾಡುವ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ಗೆ ನೂರಾರು ಜನರು ಕಾಮೆಂಟ್ ಮಾಡಿ ಹರೀಶ್ ಅವರ ಪೋಸ್ಟ್ನ್ನು ಟೀಕೆ ಮಾಡಿದ್ದರು.
ಈ ಪೋಸ್ಟ್ನ ಕುರಿತು ಸೌದಿ ಅರೇಬಿಯಾ ಸರಕಾರದ ಗಮನಕ್ಕೆ ಬಂದಿದ್ದು ದೂರು ದಾಖಲಾದ ಒಂದು ಗಂಟೆಯಲ್ಲಿ ಹರೀಶ್ನ್ನು ಬಂಧಿಸಿದ್ದಾರೆ. ಹರೀಶ್ ಅವರು ಉದ್ಯೋಗ ಮಾಡುತ್ತಿದ್ದ ಸಂಸ್ಥೆಯು ಈ ಕುರಿತು ಕ್ರಮ ಕೈಗೊಂಡಿದ್ದು ಹರೀಶ್ ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ.
ಈ ಕುರಿತ ಪೋಸ್ಟ್ ಫೇಸ್ ಬುಕ್ನಲ್ಲಿ ವೈರಲ್ ಮಾಡಲಾಗಿದ್ದು "ನಾವು ಗಲ್ಫ್ ಕರ್ಟನ್ ಫ್ಯಾಕ್ಟರಿಯವರು, ಫೇಸ್ಬುಕ್ನಲ್ಲಿ ಹರೀಶ್ ಬಂಗೇರಾ ಎಂಬವರು ಹಾಕಿದ ಅನೈತಿಕ ಪೋಸ್ಟ್ನ ಪ್ರಕರಣಕ್ಕೆ ಸಂಬಂಧಿಸಿ ಏನಾಗಿದೆ ಎಂಬುದರ ಕುರಿತು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ಈ ಪೋಸ್ಟ್ ಸ್ವೀಕಾರಕ್ಕೆ ಅರ್ಹವಾದದಲ್ಲ, ಆ ನಿಟ್ಟಿನಲ್ಲಿ ನಾವು ಹರೀಶ್ ಅವರನ್ನು ಕೆಲಸದಿಂದ ವಜಾ ಮಾಡಿದ್ದೇವೆ. ನಾವು ಈ ಪೋಸ್ಟ್ನ್ನು ಖಂಡನೆ ಮಾಡುತ್ತೇವೆ, ಹಾಗೆಯೇ ಪೊಲೀಸರಿಗೆ, ಕಾರ್ಮಿಕ ಸಚಿವಾಲಯಕ್ಕೆ ಹಾಗೂ ಸೌದಿ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದ್ದೇವೆ. ಇಂತಹ ಕೃತ್ಯವನ್ನು ಮಾಡಿದವರ ಮೇಲೆ ನಾವು ಸಹನೆ ಹೊಂದಿಲ್ಲ ಎಂದು ಬರೆಯಲಾಗಿದೆ. ಗಲ್ಫ್ ಕರ್ಟನ್ ಫ್ಯಾಕ್ಟರಿಯ ಮೆಶಾರಿ ಎಎಮ್ ಅಲ್ ಜಬ್ರ್ ಈ ಪೋಸ್ಟ್ನ್ನು ಮಾಡಿದ್ದು ಹರೀಶ್ ಇಲ್ಲೇ ಉದ್ಯೋಗ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಏತನ್ಮಧ್ಯೆ ಹರೀಶ್ ಅವರು ಮುಸ್ಲಿಮರಲ್ಲಿ ಕ್ಷಮೆ ಕೇಳುವಂತಹ ವಿಡಿಯೋ ವೈರಲ್ ಅಗುತ್ತಿದೆ. ಆ ವಿಡಿಯೋದಲ್ಲಿ "ನನ್ನಿಂದ ತಪ್ಪಾಗಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಇನ್ನು ಮಂದೆ ನಾನು ಆ ರೀತಿಯ ಪೋಸ್ಟ್ಗಳನ್ನು ಅಪ್ಲೋಡ್ ಮಾಡುವುದಿಲ್ಲ. ನನಗೆ ನಾನು ಕಾರ್ಯನಿರ್ವಹಿಸುವ ಕಂಪೆನಿಯಲ್ಲಿ ಸಮಸ್ಯೆ ಉಂಟಾಗಿದೆ" ಎಂದು ಕೇಳಿಕೊಂಡಿದ್ದಾರೆ. ಆದರೆ ಈ ವಿಡಿಯೋ ಯಾವಾಗ ಮಾಡಲಾಗಿದೆ ಎಂಬುದರ ಕುರಿತು ಖಚಿತ ಮಾಹಿತಿ ಇಲ್ಲ.
ಸೌದಿ ಅರೇಬಿಯಾದಲ್ಲಿ ಸೈಬರ್ ನಿಯಮಗಳು ತುಂಬಾ ಕಟ್ಟುನಿಟ್ಟಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡುವವರ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿದುಬಂದಿದೆ.
ಈ ನಡುವೆ ಹರೀಶ್ ಅವರ ಹೆಸರಲ್ಲಿರುವ ಈ ಫೇಸ್ ಬುಕ್ ಅಕೌಂಟ್ ಡಿಸೆಂಬರ್ ತಿಂಗಳಲ್ಲಿ ತೆರೆಯಲಾಗಿದ್ದು ಹರೀಶ್ ಅವರ ಹೆಸರಲ್ಲಿ "ನಕಲಿ ಫೇಸ್ ಬುಕ್" ಸೃಷ್ಟಿ ಮಾಡಿರುವ ದುಷ್ಕರ್ಮಿಗಳು ಈ ಪೋಸ್ಟ್ ಮಾಡಿದ್ದಾರೆ ಎಂಬ ಮಾತುಗಳು ಕೂಡಾ ಕೇಳಿ ಬರುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಹರೀಶ್ ಅವರ ಪತ್ನಿ ಸುಮನಾ ಎಮ್, ವಿದೇಶದಲ್ಲಿರುವ ತನ್ನ ಪತಿಯ ನಕಲಿ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡಲು ಕೋರಿ ಉಡುಪಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.