ಸೌದಿ ಅರೇಬಿಯಾ, ಡಿ 23 (Daijiworld News/MB) : ಸೌದಿ ಅರೇಬಿಯಾ ಕೋರ್ಟ್ , ಇಸ್ತಾಂಬುಲ್ ನಲ್ಲಿ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಕಶೋಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.
ಅಮೆರಿಕ ನಿವಾಸಿಯಾಗಿರುವ ಪತ್ರಕರ್ತ ಕಶೋಗಿ, ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆಡಳಿತವನ್ನು ಟೀಕೆ ಮಾಡಿ ಬರೆಯುತ್ತಿದ್ದರು. ಪತ್ರಕರ್ತ ಕಶೋಗಿ ಹತ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಕಶೋಗಿ ಹತ್ಯೆಯ ಹಿಂದೆ ಯುವರಾಜನ ಕೈವಾಡವಿದೆ ಎಂದು ಅಮೆರಿಕದ ಸಿಐಎ ಹಾಗೂ ಹಲವು ವಿದೇಶಗಳು ಆರಫ ಮಾಡಿದ್ದರು. ಆದರೆ ಈ ಆರೋಪವನ್ನು ಸೌದಿ ಅರೇಬಿಯಾ ಅಲ್ಲಗಳೆದಿತ್ತು.
2018ರ ಅಕ್ಟೋಬರ್ 2ರಂದು ಇಸ್ತಾಂಬುಲ್ ನಲ್ಲಿನ ಸೌದಿ ರಾಯಭಾರ ಕಚೇರಿಯಲ್ಲಿ ಕಶೋಗಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಕಶೋಗಿ ತನ್ನ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದು ಅದರ ಪ್ರಮಾಣ ಪತ್ರದ ದಾಖಲೆಯನ್ನು ಪಡೆಯುವ ಹಿನ್ನಲೆಯಲ್ಲಿ ಸೌದಿ ರಾಯಭಾರ ಕಚೇರಿಗೆ ಬಂದಿದ್ದರು.
ರಾಯಭಾರ ಕಚೇರಿಯೊಳಗೆ ಕಶೋಗಿಗೆ ಹಿಂಸೆ ನೀಡಿ 15 ಮಂದಿ ತಂಡವು ಹತ್ಯೆ ಮಾಡಿದ್ದರು. ರಾಜಕುಮಾರನ ವಿರುದ್ಧ ಬರೆದುದಕ್ಕೆ ಕಶೋಗಿಯ ಬೆರಳುಗಳನ್ನು ಕತ್ತರಿಸಿ, ಶಿರಚ್ಛೇದನ ಮಾಡಿದ್ದರು. ಆ ನಂತರ ದೇಹವನ್ನು ತುಂಡು ತುಂಡಾಗಿ ಮಾಡಿ ಬಟ್ಟೆಯಲ್ಲಿ ಸುತ್ತಿ ಆ್ಯಸಿಡ್ ಹಾಕಿ ಕರಗಿಸಿಬಿಡುವ ಮೂಲಕ ಮೃತ ದೇಹವನ್ನು ನಾಶ ಮಾಡಿದ್ದರು.