ಬ್ರೆಜಿಲ್, ಡಿ 25(Daijiworld News/MSP): "ಸರ್ಕಾರದ ಅಧಿಕೃತ ನಿವಾಸದ ಸ್ನಾನಗೃಹದಲ್ಲಿ ನಲ್ಲಿ ಕಾಲುಜಾರಿ ಬಿದ್ದು ತಲೆ ಗೋಡೆಗೆ ಬಡಿದ ಪರಿಣಾಮ ನಾನು ತಾತ್ಕಲಿಕವಾಗಿ ನೆನೆಪಿನ ಶಕ್ತಿ ಕಳೆದುಕೊಂಡಿದ್ದೆ" ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೊ ಸಂದರ್ಶನದಲ್ಲಿ ಮಂಗಳವಾರ ತಿಳಿಸಿದ್ದಾರೆ.
64ರ ಹರೆಯದ ಜೈರ್ ಸೋಮವಾರ ರಾತ್ರಿ ಅಲ್ವೋರಾಡಾ ಪ್ಯಾಲೆಸ್ ನ ಬಾತ್ ರೂಂನಲ್ಲಿ ಜಾರಿ ಬಿದ್ದಾಗ ತಲೆ ಗೋಡೆಗೆ ಢಿಕ್ಕಿಯಾಗಿತ್ತು ಹೀಗಾಗಿ ತಾತ್ಕಲಿಕವಾಗಿ ಅವರು ತಮ್ಮ ನೆನೆಪು ಶಕ್ತಿಯನ್ನು ಕಳೆದುಕೊಂಡಿದ್ದಾರಂತೆ. 2018ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಜೈರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆದಿತ್ತು.
ನಾನೀಗ ಆರೋಗ್ಯವಾಗಿದ್ದರೂ ನಿನ್ನೆಯ ಘಟನೆಯ ಬಗ್ಗೆ ನೆನಪಾಗುತ್ತಿಲ್ಲವಾದರೂ, ಆದರೆ ಅದಕ್ಕೂ ಹಿಂದಿನ ಹಲವು ನೆನಪು ಮರುಕಳಿಸುತ್ತಿದೆ ಎಂದು ಬೋಲ್ಸೋನಾರೋ ಬ್ಯಾಂಡ್ ಟೆಲಿವಿಷನ್ ಗೆ ನೀಡಿರುವ ದೂರವಾಣಿ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಅಧ್ಯಕ್ಷ ಜೈರ್ ಅವರು ಸೋಮವಾರ ರಾತ್ರಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
ಅಧ್ಯಕ್ಷ ಜೈರ್ ಜಾರಿ ಹಿಂದಕ್ಕೆ ಬಿದ್ದಿದ್ದರು. ಅವರು ಅಧ್ಯಕ್ಷರಾದಾಗಿನಿಂದ ಅವರ ಆರೋಗ್ಯವು ಕಳವಳಕಾರಿಯಾಗಿದೆ. ಚುನಾವಣಾ ಪ್ರಚಾರದ ವೇಳೆ 2018ರ ಸೆಪ್ಟೆಂಬರ್ನಲ್ಲಿ ಚೂರಿ ಇರಿತದ ದಾಳಿಯಿಂದ ಹೊಟ್ಟೆ ಭಾಗದಲ್ಲಿ ನಾಲ್ಕು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಚರ್ಮದ ಕ್ಯಾನ್ಸರ್ ನ ತಪಾಸಣೆಗೊಳಗಾಗಿದ್ದರು.