ವಾಷಿಂಗ್ಟನ್, ಡಿ 25 (Daijiworld News/PY) : ಬಿಳಿ ಗಡ್ಡಧಾರಿ ವ್ಯಕ್ತಿಯೊಬ್ಬ ಕ್ರಿಸ್ಮಸ್ ಹಬ್ಬ ಪ್ರಾರಂಭವಾಗುವ ಎರಡು ದಿನಗಳ ಮುಂದೆಯೇ ಬ್ಯಾಂಕ್ವೊಂದಕ್ಕೆ ದಾಳಿ ನಡೆಸಿ ದರೋಡೆ ಮಾಡಿದ ಹಣವನ್ನು ರಸ್ತೆಯಲ್ಲಿ ಸಾಗುತ್ತಿದ್ದ ಪಾದಾಚಾರಿಗಳಿಗೆ ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದ ಘಟನೆ ಅಮೇರಿಕಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಬಿಳಿ ಗಡ್ಡಧಾರಿ ವ್ಯಕ್ತಿಯೊಬ್ಬ ಅಮೇರಿಕಾದ ಕೊಲೋರಾಡೋದಲ್ಲಿನ ಅಕಾಡೆಮಿ ಬ್ಯಾಂಕ್ಗೆ ನುಗ್ಗಿದ್ದು, ಆಯುಧ ತೋರಿಸಿ ಬೆದರಿಕೆಯೊಡ್ಡಿ ಹಣ ದರೋಡೆ ಮಾಡಿದ್ದಾನೆ, ಅಲ್ಲದೇ ಹೆಚ್ಚಿನ ಮೊತ್ತದ ಹಣವನ್ನು ದರೋಡೆ ಮಾಡಿರುವುದಾಗಿ ಕೊಲೋರಾಡೋ ಪೊಲೀಸರು ಪ್ರಕಟಣೆಯಲ್ಲಿ ಖಚಿತಪಡಿಸಿದ್ದಾರೆ.
ಬ್ಯಾಂಕ್ ದರೋಡೆ ಮಾಡಿದ ವ್ಯಕ್ತಿಯನ್ನು ಡೇವಿಡ್ ವೇಯ್ನೆ ಒಲಿವೇರಾ (65) ವರ್ಷ ಎಂದು ಗುರುತಿಸಿದ್ದು, ದರೋಡೆ ಮಾಡಿದ ಹಣವನ್ನು ದಾರಿ ಹೋಕರತ್ತ ಎಸೆಯುತ್ತಾ.. ಮೇರಿ ಕ್ರಿಸ್ಮಸ್ ಎಂದು ಶುಭಾಶಯ ಕೋರಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮದವರಿಗೆ ತಿಳಿಸಿದ್ಧಾರೆ.
ದರೋಡೆ ಮಾಡಿದ ವ್ಯಕ್ತಿಯನ್ನು ನಂತರ ಸ್ಟಾರ್ ಬಕ್ಸ್ ಸಮೀಪ ಬಂಧಿಸಲಾಯ್ತು ಎಂದು ಕೊಲೋರಾಡೋ ಪೊಲೀಸರು ತಿಳಿಸಿದ್ದಾರೆ.
ದರೋಡೆ ಮಾಡಿದ ಒಲಿವೇರಾ ಬಂಧನದ ವೇಳೆ ಆತ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ರಸ್ತೆಯ ಮೇಲೆ ಎಸೆದಿದ್ದ ಹಣವನ್ನು ದಾರಿಯಲ್ಲಿ ಸಾಗುತ್ತಿದ್ದ ಕೆಲವರು ಬ್ಯಾಂಕ್ ಗೆ ವಾಪಸ್ ತಂದು ಕೊಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.