ಕ್ಯಾಲಿಫೋರ್ನಿಯಾ, ಜ.01 (Daijiworld News/PY) : ಬಟ್ಟೆಯಂತೆ ಧರಿಸಲಾಗುವಂತ ವಿಶ್ವದ ಮೊದಲ ಉದ್ಯಾನವನ್ನು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ವಿನ್ಯಾಸಗೊಳಿಸಿದ್ದಾರೆ.
ಈ ಉದ್ಯಾನದಲ್ಲಿ 22 ಬಗೆಯ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಇದನ್ನು ಬಟ್ಟೆಯಂತೆ ಧರಿಸಬಹುದಾಗಿದೆ.
ಈ ನೂತನ ವಿನ್ಯಾಸದ ಉದ್ಯಾನದಲ್ಲಿ ಗೇಬ್ರಿಯಲ್ ಅವರು ಎಲೆಕೋಸು, ಕ್ಯಾರೆಟ್, ಸ್ಟ್ರಾಬೆರಿ, ಕಡಲೆಕಾಯಿ, ಮೂಲಂಗಿ ಸೇರಿದಂತೆ 22ಕ್ಕೂ ಹೆಚ್ಚಿನ ತರಕಾರಿಗಳನ್ನು ಬೆಳೆಯುತ್ತಾರೆ, ಅಲ್ಲದೇ ಅದನ್ನು ಬಟ್ಟೆ ಧರಿಸುವ ರೀತಿಯಂತೆ ಧರಿಸುತ್ತಿದ್ದು, ನಿಮ್ಮ ಆಹಾರವನ್ನು ನೀವೆ ಬೆಳೆಸಿಕೊಳ್ಳಿ ಎಂದು ಹೇಳಿದ್ದಾರೆ.
ಫ್ರೆಂಚ್ ಸಸ್ಯವಿಜ್ಞಾನಿ ಪ್ಯಾಟ್ರಿಕ್ ಬ್ಲಾಂಕ್ ಅವರ ಸಸ್ಯೋದ್ಯಾನಗಳನ್ನು ನೋಡಿ ಪ್ರಭಾವಿತರಾದ ಗೇಬ್ರಿಯಲ್ ಈ ಉದ್ಯಾನದ ಯೋಜನೆಯನ್ನು ಹುಟ್ಟುಹಾಕಿದ್ದು, ವಿಶ್ವದ ಮೊದಲ ಉದ್ಯಾನ ಎಂದು ಕರೆಸಿಕೊಂಡಿದೆ.
ಮೊದಲು ಗೇಬ್ರಿಯಲ್ ಅವರು ಬಟ್ಟೆಯ ಪದರವನ್ನು ತಯಾರಿಸುತ್ತಾರೆ, ಬಳಿಕ ಬಟ್ಟೆಯ ಪದರದ ಮೇಲೆ ಸಸ್ಯಗಳ ಬೀಜಗಳನ್ನು ಅಂಟಿಸುತ್ತಾರೆ. ಒದ್ದೆಯಾದ ಬಟ್ಟೆಯ ಪದರದಲ್ಲಿರುವ ಸಸ್ಯದ ಬೀಜಗಳು ಎರಡು ವಾರಗಳ ಬಳಿಕ ಮೊಳಕೆಯೊಡೆಯುತ್ತವೆ. ಬಳಿಕ ಬೆಳೆಯಲು ಆರಂಭಿಸುತ್ತವೆ. ನೀರಾವರಿ ವ್ಯವಸ್ಥೆಗೆ ಮೂತ್ರ ಬಳಸುವುದರಿಂದ ಉಂಟಾಗುವ ತೇವಾಂಶ ಸಸ್ಯಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಈ ಮೂಲಕವಾಗಿ ಸಸ್ಯಗಳು ಒಂದು ಹಂತಕ್ಕೆ ಬೆಳೆದ ಬಳಿಕ ಹಣ್ಣು, ತರಕಾರಿಗಳನ್ನು ನೀಡುತ್ತವೆ.