ಜಕಾರ್ತ, ಜ 02 (Daijiworld News/MB) : ವಿಶ್ವವೇ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಇರುವಂತ ಸಂದರ್ಭದಲ್ಲಿ ಇಂಡೋನೇಷ್ಯಾದಲ್ಲಿ ಭೀಕರ ಪ್ರವಾಹವಾಗಿದ್ದು ಜನರು ಸಂಕಟಕ್ಕೀಡಾಗಿದ್ದಾರೆ. ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಇಂಡೋನೇಷ್ಯಾದಲ್ಲಿ ನೆರೆಯು ಭೀಕರ ರೂಪ ತಾಳಿದ್ದು ರಾಜಧಾನಿ ಜಕಾರ್ತ ನೀರಿನಲ್ಲಿ ಮುಳುಗಿದೆ. ಬುಧವಾರ ಜನರು ಹೊಸ ವರ್ಷ ಆಚರಣೆಯಲ್ಲಿದ್ದು ಆ ಸಂದರ್ಭದಲ್ಲಿ ಭಾರೀ ಮಳೆ ಸುರಿದಿದೆ. ನಿರಂತರವಾಗಿ ಮಳೆ ಸುರಿದ ಪರಿಣಾಮದಿಂದಾಗಿ ಬಹುತೇಕ ನದಿಗಳು ತುಂಬಿ ಹರಿದು ಜಕಾರ್ತ ಹಾಗೂ ಇತರೆ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಅಷ್ಟು ಮಾತ್ರವಲ್ಲದೇ ಜಕಾರ್ತ ಹೊರವಲಯದಲ್ಲಿ ಕೋಟಾ ಡಿಪೋಕ್ ನಗರದಲ್ಲಿ ಭೂಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನೆರೆಯ ಪರಿಣಾಮದಿಂದಾಗಿ 20 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದು ಈ ಭೀಕರ ಪ್ರವಾಹದಿಂದಾಗಿ ನಲುಗಿ ಹೋಗಿದ್ದು ಈಗಾಗಲೇ ಜಕಾರ್ತದಲ್ಲಿ 8 ಮಂದಿ, ಕೋಟಾ ಡಿಪೋಕ್ನಲ್ಲಿ 3 ಮಂದಿ ಸೇರಿದಂತೆ ಇಂಡೋನೇಷ್ಯಾದ ಇತರೆ ನೆರೆ ಪೀಡಿತ ಪ್ರದೇಶಗಳಲ್ಲಿ ಒಟ್ಟು 16 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ.
ರಸ್ತೆಯಲ್ಲಿ ನಿಲ್ಲಿಸಿರುವ ಕಾರುಗಳು ಪ್ರವಾಹದಿಂದಾಗಿ ಕೊಚ್ಚಿ ಹೋಗುತ್ತಿದ್ದು ಹಾವು ಮೊಸಳೆಗಳು ಕೂಡಾ ನೀರಿನಲ್ಲಿದ್ದು ಜನರಿಗೆ ಇನ್ನಷ್ಟು ಆತಂಕ ಉಂಟಾಗಿದೆ. ಕೆಲವಡೆ ನೆರೆಯಿಂದ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ಬೋಟ್ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುತ್ತಿದ್ದಾರೆ.
ಪ್ರಹಾಹ ಪೀಡಿತ ಪ್ರದೇಶಗಳಲ್ಲಿ ಬರೋಬ್ಬರಿ 370 ಮಿ.ಮಿ ಮಳೆಯಾಗಿದ್ದು, ಇಂಡೋನೇಷ್ಯಾದಲ್ಲಿ ಏಪ್ರಿಲ್ವರೆಗೂ ಹೀಗೆ ಹಲವೆಡೆ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ ಎಂದು ಜಕಾರ್ತ ರಾಜ್ಯಪಾಲರು ತಿಳಿಸಿದ್ದಾರೆ.