ವ್ಯಾಟಿಕನ್, ಜ 02 (Daijiworld News/MB) : ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನೆರೆದಿದ್ದ ಭಕ್ತರ ಗುಂಪಿಗೆ ಶುಭಾಷಯ ಕೋರುತ್ತಾ ಹೋಗುತ್ತಿದ್ದ ಸಂದರ್ಭದಲ್ಲಿ ತನ್ನ ಕೈ ಹಿಡಿದು ಎಳೆದ ಮಹಿಳೆಯ ಕೈಗೆ ಹೊಡೆದುದಕ್ಕಾಗಿ ಪೋಪ್ ಫ್ರಾನ್ಸಿನ್ ಕ್ಷಮೆಯಾಚಿಸಿದ್ದಾರೆ.
ಸಂಭ್ರಮಾಚರಣೆಯಲ್ಲಿ ಮಹಿಳೆಯ ಮೇಲೆ ನಡೆಯುವ ಎಲ್ಲಾ ರೀತಿಯ ಹಿಂಸಾಚಾರವನ್ನು ಪೋಪ್ ಖಂಡಿಸಿದ್ದು ಈಗ ಮಹಿಳೆಯ ಕೈಗೆ ಹೊಡೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜನರು ಪೋಪ್ ನಡೆಯನ್ನು ಖಂಡನೆ ಮಾಡಿದ್ದಾರೆ.
ಮಹಿಳೆಯ ಕೈಗೆ ತಳಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ಪೋಪ್, "ನಾವು ಅನೇಕ ಬಾರಿ ತಾಳ್ಮೆ ಕಳೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
"ನಾನು ಕೆಲವೊಮ್ಮೆ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ನಿನ್ನೆ ನಾನು ನಡೆದ ರೀತಿಗೆ ನಾನು ಕ್ಷಮೆ ಕೇಳುತ್ತೇನೆ" ಎಂದು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ವ್ಯಾಟಿಕನ್ನ ಬಳಿಯ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಪ್ ನೆರೆದವರ ಕೈಕುಳಿಕಿ ಶುಭಕೋರುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ಹಠಾತ್ತನೆ ಪೋಪ್ ಕೈ ಹಿಡಿದು ಎಳೆದಿದ್ದು ಪೋಪ್ ಆಕೆಯ ಕೈಕೊಡವಿ ಎರಡೇಟು ಬಾರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯಲ್ಲಿ ಮಹಿಳೆಯದ್ದು ತಪ್ಪು ಎಂದು ಹೇಳಿದ ಕೆಲವು ನೆಟ್ಟಿಗರು ಪೋಪ್ನ ಪರವಾಗಿ ನಿಂತಿದ್ದಾರೆ. ಈ ಕುರಿತು ಕಾಮೆಂಟ್ ಮಾಡಿದ ಓರ್ವ ತಪ್ಪು ಮಹಿಳೆಯದ್ದು ಎಂದು ಹೇಳಿದ್ದು, "ನಾನು ಕ್ಯಾಥೋಲಿಕ್ ಅಲ್ಲ. ಆದರೆ ಮಹಿಳೆಯ ತಪ್ಪಿದೆ. ಪೋಪ್ಗೆ ಒಂದು ಕ್ಷಣಕ್ಕೆ ನೋವಾಗಿದೆ ಎಂದು ಆ ವಿಡಿಯೋ ನೋಡುವಾಗ ತಿಳಿದು ಬರುತ್ತದೆ" ಎಂದು ಹೇಳಿದ್ದಾರೆ.
ಇನ್ನೂ ಕೆಲವರು ಪೋಪ್ ನಡೆಯನ್ನು ತೀವ್ರವಾಗಿ ಖಂಡನೆ ಮಾಡಿದ್ದಾರೆ.