ಇಸ್ಲಾಮಾಬಾದ್, ಜ.05 (Daijiworld News/PY) : ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಜನ್ಮಸ್ಥಳ ನಾನಕಾನ ಸಾಹಿಬ್ನಲ್ಲಿನ ಗುರುದ್ವಾರದ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಇದರ ಬೆನ್ನಲ್ಲೇ ಈ ಬಗ್ಗೆ ಭಾರತ ಮಾಡಿರುವ ಆರೋಪ ಸುಳ್ಳು ಎಂದು ಪಾಕಿಸ್ತಾನ ತಿಳಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶದ ಹಾಗೂ ಆಫ್ಘಾನಿಸ್ತಾನದಿಂದ ನಿರಾಶ್ರಿತರಾಗಿ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆ ವಿರುದ್ದ ಕಿಚ್ಚು ಹತ್ತಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ಸಿಖ್ಖರ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಭಾರತವು ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ ಎಂದು ಹೇಳಿತ್ತು.
ದಾಳಿಯ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳು ಸೇರಿದಂತೆ ಭಾರತದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿರುವುದಕ್ಕೆ ಉತ್ತರಿಸಿದ ಪಾಕಿಸ್ತಾನ, ಗುರುದ್ವಾರದ ಮೇಲೆ ಯಾವುದೇ ದಾಳಿ ನಡೆದಿಲ್ಲ, ಅದು ಸುರಕ್ಷಿತವಾಗಿದೆ. ನಾನಕಾನ ಸಾಹಿಬ್ ಬಳಿ ಎರಡು ಮುಸ್ಲಿಂ ಗುಂಪುಗಳ ನಡುವೆ ಸಣ್ಣ ಘರ್ಷಣೆ ನಡೆದಿದೆ ಎಂದು ತಿಳಿಸಿದೆ.
ನಾನಕಾನ ಸಾಹೀಬ್ ನಗರದಲ್ಲಿ ಶುಕ್ರವಾರ ಎರಡು ಮುಸ್ಲಿಂ ಗುಂಪುಗಳ ನಡುವೆ ಸಂಘರ್ಷ ನಡೆಯಿತು. ಆದರೆ ಗುರುದ್ವಾರದ ಮೇಲೆ ದಾಳಿಯಿಂದ ಹಾನಿ ಮಾಡಲಾಗಿದೆ ಎಂಬ ವಿಷಯ ಸುಳ್ಳು. ಇದು ಚಹಾದ ಅಂಗಡಿಯಲ್ಲಿ ನಡೆದ ಸಣ್ಣ ಹೊಡೆದಾಟವಾಗಿದೆ. ಈ ಹೊಡೆದಾಟದ ವೇಳೆ ಗುರುದ್ವಾರಕ್ಕೆ ಯಾವುದೇ ಹಾನಿಯಾಗಿಲ್ಲ ಹಾಗೂ ಯಾರು ಗುರುದ್ವಾರವನ್ನು ಮುಟ್ಟಿಲ್ಲ. ಈ ಹೊಡೆದಾಟಕ್ಕೆ ಕೋಮು ಬಣ್ಣ ಕಟ್ಟಲಾಗಿದ್ದು, ಗುರುದ್ವಾರ ಅಪವಿತ್ರಗೊಳಿಸಲಾಗಿದೆ ಎಂಬ ವಿಚಾರ ಸುಳ್ಳು ಎಂದು ತಿಳಿಸಿದೆ.