ಕೆನಡಾ, ಜ 06 (Daijiworld News/MSP): ವಿಮಾನವೊಂದು ಟೇಕ್ ಆಫ್ ಆಗುವ ವೇಳೆ 'ಟಯರ್ ' ಕಳಚಿ ಬಿದ್ದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಕೆನಡಾದ ಮಾಂಟ್ರಿಯಲ್-ಟ್ರುಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಈ ಘಟನೆಯನ್ನು ಪ್ರಯಾಣಿಕರೋರ್ವರು ಸೆರೆಹಿಡಿದಿದ್ದಾರೆ.
8684 ಏರ್ ಕೆನಡಾ ಎಕ್ಸ್ಪ್ರೆಸ್ ವಿಮಾನ ವಿಮಾನದ ಬಾಗೊಟ್ವಿಲ್ಲೆಗೆಂದು ಹಾರಾಟ ನಡೆಸುವ ವೇಳೆ ವಿಮಾನ ಟಯರ್ ಕಳಚಿಬಿದ್ದಿದೆ. ವಿಮಾನದಲ್ಲಿ ಸುಮಾರು 49 ಪ್ರಯಾಣಿಕರಿದ್ದರು. ಘಟನೆಯ ಬಳಿಕ ಹಿಂತಿರುಗಿದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆಂದು ತಿಳಿದುಬಂದಿದೆ.
"ಅನುಭವಿ ಪೈಲಟ್ಗಳು ವಿಮಾನದ ಸಂಪೂರ್ಣ ನಿಯಂತ್ರಣವನ್ನು ಕಾಯ್ದುಕೊಂಡಿದ್ದಾರೆ. ನಮ್ಮ ಪೈಲಟ್ಗಳು ಇಂಥ ಸಂದರ್ಭಗಳನ್ನು ಎದುರಿಸಲು ಉತ್ತಮ ತರಬೇತಿ ಪಡೆದಿದ್ದಾರೆ. ಆದರೂ "ಮುನ್ನೆಚ್ಚರಿಕೆ ಕ್ರಮವಾಗಿ" ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು" ಎಂದು ಜಾಝ್ ಏವಿಯೇಷನ್ನ ವಕ್ತಾರ ಮನೋನ್ ಸ್ಟುವರ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮಾನದ ಎಡ ಮುಖ್ಯ ಲ್ಯಾಂಡಿಂಗ್ ಗೇರ್ನಿಂದ ಟಯರ್ ಕಳಚಿಬೀಳುವ ದೃಶ್ಯ ಪ್ರಯಾಣಿಕರು ಸೆರೆಹಿಡಿದಿದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಇದೀಗ ವೀಡಿಯೊವನ್ನು ಸಖತ್ ವೈರಲ್ ಆಗಿದೆ.