ಬಾಗ್ದಾದ್, ಜ 8 (Daijiworld News/MB) : ಇರಾನ್ ಸೇನಾಧಿಕಾರಿ ಖಾಸಿಂ ಸೋಲೆಮನಿಯನ್ನು ಅಮೆರಿಕಾ ದಾಳಿ ನಡೆಸಿ ಹತ್ಯೆ ಮಾಡಿದ ಬಳಿಕ ಇರಾನ್ ಪ್ರತಿದಾಳಿ ನಡೆಸಿ ಇರಾಕ್ನಲ್ಲಿರುವ ಅಮೆರಿಕಾ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಆ ಬಳಿಕ ಟ್ರಂಪ್ ಟ್ವೀಟ್ ಮಾಡಿ "ಆಲ್ ಇಸ್ ವೆಲ್" ಎಂದು ಹೇಳಿದ್ದಾರೆ.
"ಆಲ್ ಇಸ್ ವೆಲ್, ಎರಡೂ ಸೇನಾಪಪಡೆಗಳ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದೆ. ಸಾವು ನೋವು ಹಾಗೂ ಆದ ಹಾನಿಯ ತನಿಖೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ನಮ್ಮ ಅತ್ಯಂತ ಶಕ್ತಿಶಾಲಿ ಹಾಗೂ ಸುಸಜ್ಜಿತ ಸೇನೆಯು ವಿಶ್ವದಾದ್ಯಂತ ಇದೆ. ನಾನು ನಾಳೆ ಬೆಳಿಗ್ಗೆ ಹೇಳಿಕೆ ನೀಡುತ್ತೇನೆ" ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ದಾಳಿ ಕುರಿತು ವರದಿ ಮಾಡಿರುವ ಇರಾನ್ ಮಾಧ್ಯಮಗಳು, ಕ್ಷಿಪಣಿ ದಾಳಿಯಲ್ಲಿ 80 ಮಂದಿ ಅಮೆರಿಕಾದ ಭಯೋತ್ಪಾದಕರು ಹತರಾಗಿದ್ದಾರೆಂದು ತಿಳಿಸಿದ್ದು ಪ್ರತೀಕಾರಕ್ಕೆ ಅಮೆರಿಕಾ ಮುಂದಾಗಿದ್ದೇ ಆದರೆ, 100 ಸ್ಥಳಗಳಿಗೆ ಗುರಿ ಇಡಲು ತಯಾರಿ ನಡೆಸಲಾಗಿದೆ ಎಂದು ಹೇಳಿದೆ.
ಇನ್ನೂ ಇರಾನ್ ಹಾಗೂ ಅಮೆರಿಕಾ ನಡುವೆ ಯುದ್ಧ ಆರಂಭವಾದರೆ ಈಡೀ ವಿಶ್ವದ ಆರ್ಥಿಕ ಸ್ಥಿತಿಗೆ ಪೆಟ್ಟು ಬೀಳಲಿದೆ. ಈ ದಾಳಿಯ ಬೆನ್ನಲ್ಲೇ ತೈಲ ಬೆಲೆ ಏರಿಕೆಯಾಗತೊಡಗಿದ್ದು ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿದ್ದು, ಏಷಿಯನ್ ವ್ಯಾಪಾರದಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ಬೆಲೆ 73.21 ಡಾಲರ್ ನಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಕಳೆದ ಒಂದು ದಶಕದಲ್ಲಿ ಅಮೆರಿಕದ ತೈಲ ಉತ್ಪನ್ನ ಎರಡಷ್ಟು ಹೆಚ್ಚಾಗಿದ್ದು ಅಮೆರಿಕ ತೈಲ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಂದು ದಿನಕ್ಕೆ 13 ಮಿಲಿಯನ್ ಬ್ಯಾರೆಲ್ಸ್ ಗಿಂತಲೂ ಹೆಚ್ಚು ತೈಲ ಉತ್ಪಾದಿಸುತ್ತಿದೆ ಎಂದು ತಿಳಿಸಿದೆ.
ಹಾಗೆಯೇ ಈ ದಾಳಿಯ ಬಳಿಕ ಚಿನ್ನ ಹಾಗೂ ಜಪಾನ್ನ ನಾಣ್ಯ ಯೆನ್ ಬೆಲೆಗಳು ಏರಿಕೆಯಾಗಿದ್ದು ಜಾಗತಿಕ ಶೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.