ಇಸ್ಲಾಮಾಬಾದ್, ಜ 14 (Daijiworld News/MSP): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಲಾಹೋರ್ ಹೈಕೋರ್ಟ್ ರದ್ದುಪಡಿಸಿದೆ. ಮುಷರಫ್ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ರಚಿಸಲಾಗಿದ್ದ ವಿಶೇಷ ನ್ಯಾಯಮಂಡಳಿಯೇ ಅಸಂವಿಧಾನಿಕ ಎಂದು ಪರಿಗಣಿಸಿದ ಕೋರ್ಟ್ ಶಿಕ್ಷೆಯನ್ನೇ ರದ್ದುಗೊಳಿಸಿದ ಆದೇಶ ಹೊರಡಿಸಿದೆ.
ನವೆಂಬರ್ 3, 2007ರಲ್ಲಿ ದೇಶದ ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಡಿ.17, 2019ರಂದು ಮರಣದಂಡನೆ ವಿಧಿಸಿತ್ತು. ಇಸ್ಲಾಮಾಬಾದ್ನ ವಿಶೇಷ ಕೋರ್ಟ್ನಲ್ಲಿ ಆರು ವರ್ಷಗಳ ಸುದೀರ್ಘ ವಿಚಾರಣೆ ನಡೆಯಿತು.
ಡಿಸೆಂಬರ್ 17ರಂದು ಮುಷರಫ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿತ್ತು. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಮುಷರಫ್, 1999ರಿಂದ 2008ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು.