ಕಠ್ಮಂಡು, ಜ.18 (Daijiworld News/PY) : ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ವಿಶ್ವದ ಕುಬ್ಜ ವ್ಯಕ್ತಿ ಖಗೇಂದ್ರ ಥಾಪ ಮಗರ್ ಅವರು ಜ.17 ಶುಕ್ರವಾರದಂದು ನೇಪಾಳದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
2 ಅಡಿ, 2.41 ಇಂಚು ಎತ್ತರದ ಖಗೇಂದ್ರ ಕಠ್ಮಂಡುವಿನ ಪೊಖಾರದಲ್ಲಿನ ಆಸ್ಪತ್ರೆಯಲ್ಲಿ ನ್ಯೂಮೋನಿಯಾದಿಂದ ಮೃತಪಟ್ಟಿದ್ದಾರೆ.
ನ್ಯುಮೋನಿಯಾದಿಂದಾಗಿ ಖಗೇಂದ್ರ ಅವರು ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಆದರೆ ಈ ಬಾರಿ ಖಗೇಂದ್ರ ಅವರಿಗೆ ಹೃದಯಕ್ಕೆ ನ್ಯುಮೋನಿಯಾ ಬಾಧಿಸಿದ್ದು, ಅವರು ಮೃತಪಟ್ಟಿದ್ದಾರೆ ಎಂದು ಖಗೇಂದ್ರ ಸಹೋದರ ಮಹೇಶ್ ತಿಳಿಸಿದ್ದಾರೆ.
ಖಗೇಂದ್ರ ಥಾಪ ಅವರನ್ನು 2010ರಲ್ಲಿ ವಿಶ್ವದ ಕುಬ್ಜ ವ್ಯಕ್ತಿ ಎಂದು ಘೋಷಿಸಲಾಗಿತ್ತು. ಅವರನ್ನು ತಪಾಸಣೆ ನಡೆಸಿದ ಬಳಿಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಖಗೇಂದ್ರ ಥಾಪ ಅವರಿಗೆ ಪ್ರಮಾಣ ಪತ್ರವನ್ನು ನೀಡಿತ್ತು.
ಖಗೇಂದ್ರ ಅವರು ಹುಟ್ಟುವಾಗಲೇ ಕುಬ್ಜರಾಗಿದ್ದರು. ಅವರು ಅಂಗೈಯಷ್ಟು ಉದ್ದವಿದ್ದರು. ತುಂಬಾ ಚಿಕ್ಕವನಿದ್ದ ಕಾರಣ ಅವರನ್ನು ಸ್ನಾನ ಮಾಡಿಸಲು ಕಷ್ಟವಾಗುತ್ತಿತ್ತು ಎಂದು ಖಗೇಂದ್ರ ಅವರ ತಂದೆ ಬಹದ್ದೂರ್ ತಿಳಿಸಿದ್ದಾರೆ ಎಂದು ಗಿನ್ನಿಸ್ ರೆರ್ಕಾಡ್ಸ್ ತಿಳಿಸಿದೆ.
27 ವರ್ಷ ವಯಸ್ಸಿನ ಖಗೇಂದ್ರ ಅವರು 12ಕ್ಕೂ ಅಧಿಕ ದೇಶಗಳಿಗೆ ಪ್ರಯಾಣಿಸಿದ್ದು, ಭಾರತದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಅಮಗೆ ಸೇರಿದಂತೆ ವಿಶ್ವದ ಇತರ ಕುಬ್ಜರನ್ನು ಭೇಟಿಯಾಗಿದ್ದರು.
ಖಗೇಂದ್ರ ಅವರ ನಿಧನಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನ ಮುಖ್ಯ ಸಂಪಾದಕ ಕ್ರೆನ್ ಗ್ಲೆನ್ಡೆ ಅವರು ಶೋಕ ವ್ಯಕ್ತಪಡಿಸಿದ್ದಾರೆ.