ಕಠ್ಮಂಡು, ಜ 21 (Daijiworld News/MB) : ಭಾರತದ ಕೇರಳ ಮೂಲದವರಾದ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಪ್ರವಾಸಿಗರು ನೇಪಾಳದ ರೆಸಾರ್ಟ್ ಒಂದರಲ್ಲಿ ಮೃತಪಟ್ಟಿದ್ದು ಕೊಠಡಿಯಲ್ಲಿ ಆದ ಅನಿಲ ಸೋರಿಕೆಯೇ ಈ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
ಕೇರಳದಿಂದ 15 ಮಂದಿಯ ತಂಡ ಪೋಖ್ರಾ ಪರ್ವತಕ್ಕೆ ಪ್ರವಾಸ ತೆರಳಿದ್ದು ಹಿಂದಕ್ಕೆ ಬರುವ ಸಂದರ್ಭದಲ್ಲಿ ಸೋಮವಾರ ರಾತ್ರಿ ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್ನಲ್ಲಿ ತಂಗಿದ್ದರು ಎಂದು ವರದಿ ತಿಳಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ರೆಸಾರ್ಟ್ ಮ್ಯಾನೇಜರ್ ಅತಿಥಿಗಳು ತಂಗಿರುವ ಕೊಠಡಿಗಳು ಬೆಚ್ಚಗಿರಲಿ ಎಂದು ಗ್ಯಾಸ್ ಹೀಟರ್ ಆನ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ಅವರು ಒಟ್ಟು ನಾಲ್ಕು ಕೊಠಡಿಗಳನ್ನು ಬುಕ್ ಮಾಡಿದ್ದು 15 ಮಂದಿಯ ಪೈಕಿ ಎಂಟು ಮಂದಿ ಒಂದು ಕೊಠಡಿಯಲ್ಲಿ ತಂಗಿದ್ದು, ಉಳಿದವರು ಇನ್ನೊಂದು ಕೊಠಡಿಯಲ್ಲಿದ್ದರು. ಹಾಗೆಯೇ ಕೊಠಡಿಯ ಎಲ್ಲಾ ಕಿಟಕಿ ಬಾಗಿಲುಗಳ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು ಎಂದು ಹೇಳಿದ್ದಾರೆ.