ಬೀಜಿಂಗ್, ಜ.23 (Daijiworld News/PY) : ಹೊಸ ಕೊರೊನಾವೈರಸ್ ಶ್ವಾಸಕೋಶದ ಸೋಂಕು ಉಂಟು ಮಾಡಿ, ನ್ಯುಮೋನಿಯಾದಿಂದ ಸಾವಿನತ್ತ ತಳ್ಳುತ್ತಿರುವ ಈ ಹೊಸ ವೈರಸ್ ಬಾವಲಿಗಳು ಅಥವಾ ಹಾವುಗಳಿಂದ ಹರಡುತ್ತಿರಬಹುದು ಎಂಬುದಾಗಿ ವೈರಸ್ನ ಜೆನೆಟಿಕ್ ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ.
ಚೀನಾದಲ್ಲಿ ಹರಡುತ್ತಿರುವ ಕೊರೊನಾವೈರಸ್ಗೆ ಈಗಾಗಲೇ 17 ಜನರು ಬಲಿಯಾಗಿದ್ದು, ವೈರಸ್ನ ಡಿಎನ್ಎ ಒಳಗೊಂಡಿರುವ ಜಿನೋಮ್ ಕ್ರಮಾಗತಿ ಪರೀಕ್ಷೆಗಳ ಮೂಲಕ ವೈರಸ್ ಮೂಲವನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ. ಈ ಪ್ರಕಾರ ಎರಡು ಅಧ್ಯಯನಗಳಲ್ಲಿ ವೈರಸ್ ಹರಡಲು ಬಾವಲಿಗಳು ಕಾರಣ ಎನ್ನಲಾಗಿದೆ.
ಚೀನಾದ ವುಹಾನ್ನಲ್ಲಿ ಪಸರಿಸಿರುವ ಕೊರೊನಾವೈರಸ್ಗೂ ಬಾವಲಿಗಳಲ್ಲಿ ಕಂಡುಬಂದ ವೈರಸ್ ತಳಿಗೂ ಹೋಲಿಕೆ ಇದೆ ಎಂದು ವರದಿಯೊಂದರಲ್ಲಿ ಮಂಗಳವಾರ ಪ್ರಕಟಿಸಲಾಗಿತ್ತು.
ವುವಾನ್ ಕೊರೊನಾವೈರಸ್ ಬಾವಲಿಗಳಿಂದ ಹೊರಬಂದು ಪಸರಿಸಿದೆ ಎಂದು ಹೇಳಬಹುದಾಗಿದೆ. ಆದರೆ ಮನುಷ್ಯರಿಗೆ ಬಾವಲಿಗಳಿಂದ ಈ ವೈರಸ್ ರವಾನೆಯಾಗಲು ಯಾವ ಪ್ರಾಣಿ ಕಾರಣ ಎಂದು ಚೀನಾದ ಹಲವು ಸಂಶೋಧನಾ ಸಂಸ್ಥೆಗಳು ತಿಳಿಸಿವೆ.
ಬುಧವಾರ ವರದಿಯೊಂದರಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಬಾವಲಿ ಹಾಗೂ ಮನುಷ್ಯನ ನಡುವೆ ಹಲವು ಹೋಲಿಕೆ ಹಾಗೂ ವಿಶ್ಲೇಷಣೆಗಳಿಂದ ವೈರಸ್ ಹರಡಲು ಹಾವು ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಮನುಷ್ಯನಿಗೆ ಪ್ರಾಣಿಗಳಿಂದ ಹೇಗೆ ವೈರಸ್ ಹರಡಬಹುದು ಎಂಬುದರ ಬಗ್ಗೆ ಎರಡೂ ಅಧ್ಯಯನಗಳಲ್ಲಿ ತಿಳಿಸಿಲ್ಲ.
ವನ್ಯ ಜೀವಿಗಳನ್ನು ಮಾರಾಟ ಮಾಡುವ ಆಹಾರ ಮಾರುಕಟ್ಟೆಗಳಲ್ಲಿ ಕೊರೊನಾವೈರಸ್ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಬೀಜಿಂಗ್ನ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಸಾಗರೋತ್ಪನ್ನ ಮಾರುಕಟ್ಟೆಯಲ್ಲಿ ವನ್ಯ ಜೀವಿಗಳಿಂದ ವೈರಸ್ ಹರಡಿದೆ ಎಂದು ಹೇಳಲಾಗುತ್ತಿದ್ದು, ಈ ವಿಚಾರವಾಗಿ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿಲ್ಲ.