ವಿಶ್ವಸಂಸ್ಥೆ, ಜ 23 (Daijiworld News/MSP): ವಿಶ್ವಸಂಸ್ಥೆಯಲ್ಲಿ ಸಭೆಯಲ್ಲಿ ಭಾರತವನ್ನು ಕೆಣಕಲು ಬಂದ ಪಾಕಿಸ್ತಾನಕ್ಕೆ ಭಾರತ ಬಿಸಿಮುಟ್ಟಿಸಿದ್ದು, " ಭಾರತದ ವಿರುದ್ದ ಪಾಕಿಸ್ತಾನ ದ್ವೇಷ ಸಾಧಿಸುವುದು ಮತ್ತು ಸುಳ್ಳು ಹೇಳಿಕೆಗಳ ಮೂಲಕ ಆರೋಪ ಮಾಡುತ್ತಾ ಕಾಲಹರಣ ಮಾಡುವುದಾಗಿದೆ" ಎಂದು ಭಾರತ ಖಡಕ್ ಪ್ರತಿಕ್ರಿಯೆ ನೀಡಿದೆ.
ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಮತ್ತೆ ಕೆದಕಿದ ಪಾಕಿಸ್ತಾನಕ್ಕೆ ಭಾರತ ಈ ಪ್ರತಿಕ್ರಿಯೆಯಿಂದ ಮುಖಭಂಗವಾಗಿದೆ. ಹೀಗಾಗಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸುವ ಪಾಕ್ ನ ಪ್ರಯತ್ನಕ್ಕೂ ಹಿನ್ನಡೆಯಾಗಿದೆ.
ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಸಾದ್ ಅಹಮದ್ ವರೈಚ್ ಕಾಶ್ಮೀರ ವಿಚಾರವನ್ನು ಕೆದಕಿ ಅಂತಾರಾಷ್ಟ್ರೀಯ ಸಮುದಾಯದ ಗಮನಸೆಳೆಯಲು ಸಾಕಷ್ಟು ಪ್ರಯತ್ನಪಟ್ಟರು. ಆದರೆ ಅದಕ್ಕೆ ಅವಕಾಶ ನೀಡದೆ ವಿಶ್ವಸಂಸ್ಥೆಯ ಭಾರತದ ಶಾಶ್ವತ ಉಪ ಪ್ರತಿನಿಧಿ ಕೆ. ನಾಗರಾಜ ನಾಯ್ಡು ಪಾಕ್ ಕುತಂತ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಾಕ್ ವಿಶ್ವಸಂಸ್ಥೆಯಲ್ಲಿನ ತನ್ನ ಅಮೂಲ್ಯ ಸಮಯವನ್ನು ಭಾರತ ದೇಶದ ವಿರುದ್ಧ ದ್ವೇಷ ಸಾಧಿಸುವುದು ಮತ್ತು ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಭಾಷಣ ಮಾಡುವುದರಲ್ಲೇ ವ್ಯರ್ಥ ಮಾಡುತ್ತಿದೆ. ಮೀನು ನೀರನ್ನು ಕುಡಿದು ಹೊರ ಹಾಕುವಂತೆ, ಪಾಕ್ ಕೂಡಾ ತನ್ನ ಭಾಷಣದಲ್ಲಿ ಹಗೆತನದ ಮಾತುಗಳನ್ನು ಕಕ್ಕುತ್ತಿದೆ. ಆದರೆ ವಿಶ್ವ ಸಮುದಾಯಕ್ಕೆ ವಾಸ್ತವ ಸಂಗತಿ ಏನೆಂಬುದು ಚೆನ್ನಾಗಿ ಗೊತ್ತಿದೆ ಎಂದು ತೀಕ್ಷ್ಣವಾಗಿ ಪಾಕ್ ಗೆ ಪ್ರತಿಕ್ರಿಯಿಸಿದ್ದಾರೆ.