ಕಠ್ಮಂಡು, ಜ.24 (Daijiworld News/PY) : ಚೀನಾದ ಜನತೆಯನ್ನು ಆತಂಕಗೊಳಿಸಿರುವ ಕೊರೊನಾ ವೈರಸ್ ಈಗ ನೇಪಾಳದಲ್ಲಿ ಪತ್ತೆಯಾಗಿದ್ದು, ಭಾರತ ವಿದೇಶದಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕೆಂದು ತಿಳಿಸಿದೆ.
ನೇಪಾಳಕ್ಕೆ ಚೀನಾದಿಂದ ಬಂದ ವಿದ್ಯಾರ್ಥಿಯೊಬ್ಬ ಅನಾರೋಗ್ಯ ಪೀಡಿತನಾಗಿದ್ದು, ತಕ್ಷಣವೇ ಆತನ ರಕ್ತ ತಪಾಸಣೆ ಮಾಡಿದ ವೇಳೆ ಕೊರೊನಾವೈರಸ್ ಇದೆ ಎಂದು ಶುಕ್ರವಾರ ತಿಳಿದುಬಂದಿದೆ. ಈ ಕಾರಣದಿಂದಾಗಿ ನೇಪಾಳದ ಕಠ್ಮಂಡು ಸಂಪರ್ಕದಲ್ಲಿರುವ ಉತ್ತರ ಭಾರತದ ರಾಜ್ಯದ ಜನರು ಆತಂಕಗೊಂಡಿದ್ಧಾರೆ.
ಕಳೆದ ಡಿಸೆಂಬರ್ನಲ್ಲಿ ಅಪಾಯಕಾರಿಯಾದ ಕೊರೊನಾವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಈಗಾಗಲೇ ಚೀನಾದಲ್ಲಿ ಸುಮಾರು 24 ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ವೈರಸ್ ಅಮೆರಿಕಾ, ಏಷ್ಯಾದ ಕೆಲ ನಗರಗಳು, ಚೀನಾದ ಇತರೆ ಭಾಗಗಳು, ದಕ್ಷಿಣ ಕೊರಿಯಾ, ಜಪಾನ್, ಥೈವಾನ್, ಥಾಯ್ಲೆಂಡ್ ದೇಶಗಳಲ್ಲಿ ಕಾಣಿಸಿಕೊಂಡಿದೆ. ಅಂತರಾಷ್ಟ್ರೀಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಚೀನಾದಲ್ಲಿ ಸಾರ್ವಜನಿಕ ಆರೋಗ್ಯ ಕುರಿತಂತೆ ತುರ್ತುಪರಿಸ್ಥಿತಿ ಘೋಷಿಸಲು ಇದು ಸಕಾಲವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾದಲ್ಲಿ ನ್ಯುಮೋನಿಯಾ ಲಕ್ಷಣಗಳಿರುವ ಸುಮಾರು 830 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ಸುಮಾರು 25 ಮಂದಿ ಮೃತಪಟ್ಟಿದ್ದು, ಉಳಿದ ಕೋರೋನಾ ವೈರಸ್ ಪೀಡಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಎರಡನೆ ಪ್ರಕರಣದಲ್ಲಿ ಜಪಾನಿನಲ್ಲಿ ವ್ಯಕ್ತಿಯೊಬ್ಬರಿಗೆ ರಕ್ತ ಪರೀಕ್ಷೆ ಮಾಡಿದ ವೇಳೆ ಕೊರೊನಾ ವೈರಸ್ ಇದೆ ಎಂದು ತಿಳಿದುಬಂದಿದೆ.