ಬೀಜಿಂಗ್, ಜ 25 (Dajiworld News/MB) : ಚೀನಾದಲ್ಲಿ ಕೊರೋನಾ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದ್ದು ಇಂದು ಕೊರೋನಾ ವೈರಸ್ ಪತ್ತೆಯಾದವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೋರ್ವರು ಸಾವನ್ನಪ್ಪಿದ್ದಾರೆ.
ಮೃತ ವೈದ್ಯನನ್ನು ಹುಬೈ ಕ್ಸಿನ್ಹುವಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 62 ವರ್ಷ ಪ್ರಾಯದ ಲಿಯಾಂಗ್ ವುಡಾಂಗ್ ಎಂದು ಗುರುತಿಸಲಾಗಿದೆ.
ಕೊರೋನಾದ ಲಕ್ಷಣಗಳು ಕಂಡ 2 ದಿನಗಳ ನಂತರ ಜನವರಿ 18 ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಈ ವೈರಸ್ ಡಿಸೆಂಬರ್ ಅಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು ಇದನ್ನು ಹೊಸ ತಳಿಯ ವೈರಸ್ ಕೊರೋನ ಎಂದು ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಇತ್ತೀಚೆಗೆ ದೃಢಪಡಿಸಿದೆ. ಇದನ್ನು 2019-ಎನ್ಸಿಒವಿ ಅಥವಾ ನೋವಲ್ ಕೊರೋನಾ ವೈರಸ್ ಎಂದು ಕರೆಯಲಾಗುತ್ತಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ ಚೀನಾವೇ ತತ್ತರಿಸುವಂತೆ ಮಾಡಿದ ಈ ವೈರಸ್ನಿಂದಾಗಿ ಈಗಾಗಲೇ 41 ಜನರು ಮೃತಪಟ್ಟಿದ್ದು 1,300 ಜನರಲ್ಲಿ ಈ ವೈರಸ್ ಪತ್ತೆಯಾಗಿದೆ.
ಈ ವೈರಸ್ ಹರಡುವ ಹಿನ್ನಲೆಯಲ್ಲಿ ಅದರ ಲಕ್ಷಣಗಳು ಕಂಡು ಬಂದವರಿಗೆ ಪ್ರತ್ಯೇಕ ವಾರ್ಡ್ನಲ್ಲಿ ಇರಿಸುವುದು ಮಾತ್ರವಲ್ಲದೆ, ವುಹಾನ್ ನಗರದಲ್ಲಿ ತ್ವರಿತವಾಗಿ 1000 ಹಾಸಿಗೆಗಳು ಇರುವ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ 67 ಆಸ್ಪತ್ರೆಗಳಲ್ಲಿ ವಿಶೇಷ ಕೊಠಡಿ ತೆರೆಯಲಾಗಿದೆ. ಇನ್ನೊಂದು 1,300 ಹಾಸಿಗೆಗಳ ಆಸ್ಪತ್ರೆ ಮಾಡಲು ನಿರ್ಧಾರ ಮಾಡಿದ್ದು ಅದು ಫೆ.3 ರ ಒಳಗೆ ಸಂಪೂರ್ಣವಾಗಲಿದೆ ಎಂದು ಹೇಳಲಾಗಿದೆ.
ಚೀನಾದ ವುಹಾನ್ ನಗರದಲ್ಲಿ 700 ಭಾರತೀಯ ವಿದ್ಯಾರ್ಥಿಗಳು ಇದ್ದು ಇದೀಗ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ರಜೆಯ ಹಿನ್ನಲೆಯಲ್ಲಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಚೀನಾದಲ್ಲಿರುವ ಭಾರತದ ರಾಯಭಾರಿ ಕಚೇರಿಯು ಗುರುವಾರ ಸಹಾಯವಾಣಿಯನ್ನು ಆರಂಭ ಮಾಡಿದ್ದು ನಗರದಲ್ಲಿ ಉಳಿದಿರುವ ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ ಹಾಗೂ ಇತರೆ ವಸ್ತುಗಳ ಪೂರೈಕೆ ಮಾಡಲು ಕ್ರಮಕೈಗೊಳ್ಳಲು ಒತ್ತಾಯಿಸಿ ಸಂಬಂಧಿತ ಚೀನಿ ಅಧಿಕಾರಿಗಳನ್ನು ಸಂಪರ್ಕ ಮಾಡಿದೆ.
ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಕೊರಿಯಾ, ಜಪಾನ್, ವಿಯೆಟ್ನಾಂ, ಸಿಂಗಾಪುರ್, ಥೈಲ್ಯಾಂಡ್, ಫ್ರಾನ್ಸ್, ನೇಪಾಳ, ಆಸ್ಟ್ರೇಲಿಯಾ ಮತ್ತು ತೈವಾನ್ ದೇಶಗಳಲ್ಲಿಯೂ ಹೊಸ ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಆಸ್ಟ್ರೇಲಿಯಾದಲ್ಲಿ ಈಗಾಗಲೇ 4 ಜನರಲ್ಲಿ ವೈರಸ್ ಇರುವುದು ಖಚಿತವಾಗಿದೆ. ಆದಾಗ್ಯೂ, ಜಾಗತಿಕ ತುರ್ತು ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಘೋಷಿಸಿಲ್ಲ.