ಪಾಕಿಸ್ತಾನ, ಜ.27 (Daijiworld News/PY) : ಯುವತಿಯ ವಿವಾಹದ ದಿನದಂದು ಆಕೆಯನ್ನು ಅಪಹರಿಸಿ ಮುಸ್ಲಿಂ ಯುವಕನೊಂದಿಗೆ ವಿವಾಹ ಮಾಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹಾಲ ಎಂಬಲ್ಲಿ ನಡೆದಿದೆ.
ಜ.25 ಶನಿವಾರದಂದು ಮತಿಯಾರಿ ಜಿಲ್ಲೆಯ ಸಿಂಧ್ ಪ್ರಾಂತ್ಯ ಹಾಲ ಎಂಬಲ್ಲಿ ಭಾರತಿ ಬಾಯ್ ಎಂಬಾಕೆಯ ವಿವಾಹ ಸಮಾರಂಭವನ್ನು ಏರ್ಪಾಡು ಮಾಡಲಾಗಿತ್ತು. ಈ ವೇಳೆ ಭಾರತಿ ಬಾಯ್ಯನ್ನು ಯುವಕರ ಗುಂಪೊಂದು ಅಪಹರಿಸಿದೆ ಎನ್ನಲಾಗಿದೆ. ಬಳಿಕ ಭಾರತಿ ಬಾಯ್ ಶಾ ರುಕ್ ಗಲ್ ಎಂಬಾತನನ್ನು ವಿವಾಹವಾಗಿದ್ದಾಳೆ.
ಅಪಹಾರಣಕಾರರ ವಿರುದ್ದ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ, ಭಾರತಿ ಬಾಯ್ಯನ್ನು ವಿವಾಹ ಸಮಾರಂಭದಿಂದ ಬಲವಂತವಾಗಿ ಕರೆದೊಯ್ಯಲು ಪೊಲೀಸರು ಸಹಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತೀ ವರ್ಷ 12-28 ವರ್ಷದೊಳಗಿನ ಸುಮಾರು 1000 ಯುವ ಸಿಂಧಿ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ ಎಂದು ಯುಎಸ್ ಮೂಲದ ಸಿಂಧಿ ಫೌಂಡೇಶನ್ ತಿಳಿಸಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಕ್ರೈಸ್ತರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ, 19 ವರ್ಷ ಪ್ರಾಯದ ಜಗ್ಜಿತ್ ಕೌರ್ ಎಂಬಾಕೆ ಕೆಲವು ದಿನಗಳ ಕಾಲ ನಾಪತ್ತೆಯಾಗಿದ್ದಳು. ಬಳಿಕ ಅವಳನ್ನು ಅಪಹರಣಕಾರರು ಅಪಹರಿಸಿ ಬಲವಂತವಾಗಿ ಮುಸ್ಲಿಂ ಯುವಕನೊಂದಿಗೆ ವಿವಾಹ ಮಾಡಿಸಿದ್ಧಾರೆ ಎಂದು ತಿಳಿದು ಬಂದಿತ್ತು. ಅಲ್ಲದೇ, ಭಗ್ವಾನ್ ಸಿಂಗ್ ಎಂಬುವವರ ಮಗಳನ್ನು ಅಪಹರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯು ಭಾರತದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಹಲವಾರು ರಾಜಕೀಯ ಮುಖಂಡರು ಇಂತಹ ಅಪರಾಧಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.