ಬೀಜಿಂಗ್, ಜ.29 (Daijiworld News/PY) : ಚೀನಾದಲ್ಲಿ ವ್ಯಾಪಕವಾಗಿ ಪಸರಿಸುತ್ತಿರುವ ಕೊರೊನಾ ವೈರಸ್ ವುಹಾನ್ ನಗರದಲ್ಲಿ ಉತ್ಪತ್ತಿಯಾಗಿದ್ದು, ಇದು ಚೀನಾದ ಜೈವಿಕಾಸ್ತ್ರ ಯೋಜನೆಯ ಭಾಗವಾಗಿತ್ತು ಎಂದು ಇಸ್ರೇಲಿ ಗುಪ್ತದಳದ ಮಾಜಿ ಅಧಿಕಾರಿ ಡಾನಿ ಶೋಹಂ ಹೇಳಿದ್ದಾರೆ.
ವುಹಾನ್ ಇನ್ಸಿಟ್ಯೂಟ್ ಆಫ್ ವೈರೋಲಜಿಯು ಚೀನಾದ ಅತ್ಯಾಧುನಿಕ ವೈರಸ್ ರಿಸರ್ಚ್ ಲ್ಯಾಬೊರೇಟರಿ ಆಗಿದ್ದು, ಈ ಲ್ಯಾಬೊರೇಟರಿ ಬಗ್ಗೆ 2015ರಲ್ಲಿ ವುಹಾನ್ನ ಟಿವಿ ಪ್ರಸಾರ ಮಾಡಿದ್ದ ವರದಿಯೊಂದನ್ನು ಕಳೆದ ವಾರ ರೇಡಿಯೊ ಫ್ರೀ ಏಷ್ಯಾ ಮರುಪ್ರಸಾರ ಮಾಡಲಾಗಿತ್ತು.
ವುಹಾನ್ನ ಇನ್ಸಿಟ್ಯೂಟ್ ಆಫ್ ವೈರೋಲಜಿ ಲ್ಯಾಬೊರೇಟರಿಯು, ಮಾರಣಾಂತಿಕ ವೈರಸ್ಗಳ ಬಗ್ಗೆ ಅಧ್ಯಯನ ನಡೆಸುವ ಚೀನಾದ ಏಕೈಕ ಪ್ರಯೋಗಾಲಯವಾಗಿದೆ.
ಈ ಸಂಸ್ಥೆಯಲ್ಲಿನ ಕೆಲವು ಪ್ರಯೋಗಾಲಯಗಳು ಚೀನಾದ (ಜೈವಿಕಾಸ್ತ್ರ) ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದ್ದು, ಮುಖ್ಯವಾಗಿ ಅಲ್ಲದಿದ್ದರೂ, ಇವು ಚೀನಾದ ಜೈವಿಕಾಸ್ತ್ರ ಯೋಜನೆಯಲ್ಲಿ ಜೊತೆಯಾಗಿವೆ ಎಂದು ಶೋಹಂ ಹೇಳಿರುವುದಾಗಿ ದಿ ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.
ನಾಗರಿಕ- ಸೇನಾಪಡೆಯ ಅಧ್ಯಯನದ ಭಾಗವಾಗಿ ಜೈವಿಕಾಸ್ತ್ರಗಳ ಕಾರ್ಯ ಆರಂಭಿಸಿದ್ದು, ಇದು ರಹಸ್ಯವಾಗಿ ನಡೆದಿದೆ ಎಂದು ಶೋಹಂ ಇಮೇಲ್ನಲ್ಲಿ ತಿಳಿಸಿದ್ದಾರೆ.
ಇಸ್ರೇಲಿ ಗುಪ್ತದಳದ ಮಾಜಿ ಅಧಿಕಾರಿ ಡಾನಿ ಶೋಹಂ ಅವರು ಮೆಡಿಕಲ್ ಮೈಕ್ರೊಬಯಾಲಜಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 1970-1991ರ ಅವಧಿಯಲ್ಲಿ ಇಸ್ರೇಲಿ ಮಿಲಿಟರಿಯ ಗುಪ್ತದಳದಲ್ಲಿ ಹಿರಿಯ ವಿಶ್ಲೇಷಕರಾಗಿದ್ದು, ಇವರು ಲೆಫ್ಟಿನೆಂಟ್ ಕರ್ನಲ್ ಸ್ಥಾನವನ್ನು ಹೊಂದಿದ್ದರು.
ಅದಾಗಿಯೂ, ಚೀನಾ ಜೈವಿಕಾಸ್ತ್ರಗಳ ಬಗೆಗಿನ ಆರೋಪವನ್ನು ನಿರಾಕರಿಸಿದ್ದು, ಕಳೆದ ವರ್ಷ ಯುದ್ಧ ಕಾರ್ಯಾಚರಣೆಗಳಲ್ಲಿ ಜೈವಿಕಾಸ್ತ್ರ ಬಳಕೆಯ ವಿಚಾರವಾಗಿ ಚೀನಾದ ರಾಜ್ಯ ಇಲಾಖೆ ಸಂಶಯ ವ್ಯಕ್ತ ಪಡಿಸಿತ್ತು.