ಲಂಡನ್, ಜ.30 (Daijiworld News/PY) : ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಐರೋಪ್ಯ ಒಕ್ಕೂಟದ ಸಂಸತ್ನಲ್ಲಿ ಮಂಡನೆಯಾದ ನಿರ್ಣಯದ ಮೇಲಿನ ಮತದಾನವನ್ನು ಮಾರ್ಚ್ನವರೆಗೆ ಮುಂದೂಡಲಾಗಿದೆ.
ಜ.29 ಬುಧವಾರದಂದು ಬ್ರುಸೆಲ್ಸ್ನಲ್ಲಿ ನಡೆದ ಐರೋಪ್ಯ ಒಕ್ಕೂಟದ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದ್ದು, ಗುರುವಾರ ಮತದಾನ ನಡೆಸಲು ನಿರ್ಧರಿಸಲಾಗಿತ್ತು.
ಅಧಿವೇಶನದಲ್ಲಿ ಐರೋಪ್ಯ ಆಯೋಗದ ಉಪಾಧ್ಯಕ್ಷೆ ಹೆಲೆನಾ ಡಲ್ಲಿ ಅವರು ಭಾರತ ಹಾಗೂ ಐರೋಪ್ಯ ಒಕ್ಕೂಟದ ನಡುವಿನ ಬಾಂಧವ್ಯದ ಪರವಾಗಿ ಮಾತನಾಡಿದ್ದರು.
ಭಾರತದಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರ ನಿವಾರಣೆ ಮಾಡುವಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ ಪ್ರಮುಖ ಪಾತ್ರ ವಹಿಸುವ ಭರವಸೆ ಇದೆ. ಆಯೋಗವು, ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ನಲ್ಲಿ ನಡೆಯಲಿರುವ 15ನೇ ಭಾರತ-ಐರೋಪ್ಯ ಒಕ್ಕೂಟದ ಶೃಂಗಸಭೆಯಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿದೆ ಎಂದು ಹೇಳಿದ್ದರು.
ಸಿಎಎ ಭಾರತದ ಆಂತರಿಕ ವಿಚಾರ. ನೆರೆಯ ದೇಶಗಳಲ್ಲಿ ತೊಂದರೆ ಅನುಭವಿಸುವ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಇದರ ಉದ್ದೇಶ ಎಂದು ಭಾರತ ಇದಕ್ಕೆ ಪ್ರತಿಕ್ರಿಯೆ ನೀಡಿತ್ತು.