ವುಹಾನ್, ಫೆ.01 (Daijiworld News/PY) : ಕೊರೋನಾ ವೈರಸ್ನಿಂದ ಈಗಾಗಲೇ ಸಾವನ್ನಪ್ಪಿದವರ ಸಂಖ್ಯೆ 259ಕ್ಕೆ ಏರಿದೆ. ಅಲ್ಲದೇ, ಸೋಂಕು ತಗುಲಿದವರ ಪ್ರಮಾಣಾ ಕೂಡಾ ದಿನದಿಂದ ದಿನಕ್ಕೆ ಏರುತ್ತಿದ್ದು ಸುಮಾರು 12,000 ಮಂದಿಯಲ್ಲಿ ವೈರಾಣು ಪತ್ತೆಯಾಗಿರುವ ಮಾಹಿತಿಯನ್ನು ಚೀನಾ ಸರ್ಕಾರ ತಿಳಿಸಿದೆ.
ಜ.31 ಶುಕ್ರವಾರದಂದು ಒಂದೇ ದಿನದಲ್ಲಿ 46 ಜನರು ತೀವ್ರವಾದ ಉಸಿರಾಟದಿಂದ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ವುಹಾನ್ ಪ್ರಾಂತ್ಯದಲ್ಲೇ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಕೊರೋನಾ ವೈರಸ್ ದಾಳಿಗೆ ಒಳಗಾಗಿರುವ ಚೀನಾದ ವುಹಾನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರಲಾಗಿದ್ದು, ಏರ್ ಇಂಡಿಯಾ ಬೋಯಿಂಗ್ 747 ವಿಮಾನದಲ್ಲಿ ಶನಿವಾರ ಮುಂಜಾನೆ ಸುಮಾರು 324 ಭಾರತೀಯರನ್ನು ಕರೆತರಲಾಗಿದೆ ಎಂದು ವರದಿ ತಿಳಿಸಿದೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಹಾಗೂ ಏರ್ ಇಂಡಿಯಾ ಪ್ಯಾರಾಮೆಡಿಕ್ನ ಐವರು ವೈದ್ಯರ ತಂಡ ಕೂಡ ಜೊತೆಗಿದ್ದು ಅಗತ್ಯವಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.