ಇಸ್ಲಾಮಾಬಾದ್, ಫೆ.01 (Daijiworld News/PY) : ಪಂಜಾಬ್ ಪ್ರಾಂತ್ಯದಲ್ಲಿ ಮಿಡತೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾದ ಕಾರಣ ಮರುಭೂಮಿ ಮಿಡತೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಈ ವಿಚಾರವಾಗಿ ಶನಿವಾರ ಪಾಕಿಸ್ತಾನದ ನಾಲ್ಕೂ ಪ್ರಾಂತ್ಯಗಳಾದ ಸಿಂಧ್, ಬಲೂಚಿಸ್ತಾನ್, ಖೈಬರ್ ಪಕ್ತುಂಕ್ವಾ, ಪಂಜಾಬ್ನ ಮಂತ್ರಿಗಳು, ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ ಬಳಿಕ ಪ್ರಧಾನಿ ಇಮ್ರಾನ್ ಖಾನ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ರಾಷ್ಟ್ರೀಯ ಕ್ರಿಯಾ ಯೋಜನೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಸುದ್ಧಿ ಮಾಧ್ಯಮ ಡಾನ್ ವರದಿ ಮಾಡಿದೆ.
ತೀವ್ರವಾಗಿ ವ್ಯಾಪಿಸಿರುವ ಸಮಸ್ಯೆಯನ್ನು ಪರಿಹರಿಸಲು ಸುಮಾರು 338 ಕೋಟಿ (730 ಕೋಟಿ ಪಾಕಿಸ್ತಾನಿ ರೂಪಾಯಿ) ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ಮಿಡತೆ ಹಾವಳಿಯನ್ನು ನಿಯಂತ್ರಿಸಿ ಹಾಗೂ ಬೆಳೆ ನಾಶವನ್ನು ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಶೀಘ್ರವೇ ಕೈಗೊಳ್ಳುವಂತೆ ಖಾನ್, ಅಧಿಕಾರಿಗಳಿಗೆ ತಿಳಿಸಿದ್ದಾರೆ.
2019ರ ಮಾರ್ಚ್ನಲ್ಲಿ ಮೊದಲ ಬಾರಿಗೆ ಕಾಣಸಿಕೊಂಡಿದ್ದ ಮಿಡತೆ ಹಾವಳಿ ಸಿಂಧ್, ಬಲೂಚಿಸ್ತಾನ್, ಖೈಬರ್ ಪಕ್ತುಂಕ್ವಾ ಹಾಗೂ ದಕ್ಷಿಣ ಪಂಜಾಬ್ ಪ್ರಾಂತ್ಯದ ಸುಮಾರು 9 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ವ್ಯಾಪಿಸಿತ್ತು. ಇದರಿಂದಾಗಿ ಸುಮಾರು ನೂರಾರು ಕೋಟಿ ಬೆಳೆ ಹಾಗೂ ಮರಗಳೂ ಹಾನಿಯಾಗಿದ್ದವು.