ವುಹಾನ್, ಫೆ 02 (Daijiworld News/MB) : ಭಾರತ ಸರ್ಕಾರ ತನ್ನ ರಾಯಭಾರ ಕಚೇರಿಯಿಂದ ವಾಹನ ಕಳಿಸಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತೇವೆ ಎಂದು ಹೇಳಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪು ಏನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್ ಎಂದು ಚೀನಾದಲ್ಲಿರುವ ಪಾಕಿಸ್ತಾನದ ವಿದ್ಯಾರ್ಥಿಗಳು ವಿಡಿಯೋ ಮೂಲಕ ಹೇಳಿದ್ದು ಅದೀಗ ವೈರಲ್ ಆಗುತ್ತಿದೆ.
ಈ ವಿಡಿಯೋ ಟ್ವಿಟರ್ನ ಇಂಡಿಯಾ ಟ್ರೆಂಡ್ ಪಟ್ಟಿಯಲ್ಲಿಯೂ ಟಾಪ್ನಲ್ಲಿಯೇ ಇದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿದೇಶದಲ್ಲಿ ಓದಿ, ದುಡಿದು ಸ್ವದೇಶಕ್ಕೆ ಹಣ ಕಳುಹಿಸಿ ಎಂದು ಹೇಳಿದ್ದರು. ನಾವು ಅವರ ಮಾತಿಗೆ ಗೌರವ ನೀಡುತ್ತೇವೆ. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಬಿಟ್ಟಿದೆ ಎಂದು ವಿದ್ಯಾರ್ಥಿಗಳು ನೊಂದು ನುಡಿದಿದ್ದಾರೆ.
ಫೆ.2 ರಂದು ಪಾಕಿಸ್ತಾನದ ಜನಪ್ರಿಯ ದಿನಪತ್ರಿಕೆ "ಡಾನ್" ಕೂಡಾ ಚೀನಾದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಸಂಪಾದಕೀಯ ಪ್ರಕಟಿಸಿದೆ. ಚೀನಾದಲ್ಲಿ 30 ಸಾವಿರ ಪಾಕಿಸ್ತಾನ ಪ್ರಜೆಗಳಿದ್ದಾರೆ. ಹಾಗೆಯೇ ವೈರಸ್ ಹಬ್ಬಿರುವ ಕೇಂದ್ರ ನೆಲೆಯಾಗಿರುವ ವುಹಾನ್ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರನ್ನು ಪಾಕಿಸ್ತಾನಕ್ಕೆ ಕರೆತರಲು ಸಾಧ್ಯವೇ? ಅವರನ್ನು ಕರೆ ತಂದರೆ ನಿಗಾ ಘಟಕದಲ್ಲಿ ಕೆಲ ದಿನಗಳು ಉಳಿಸಿ, ವೈರಸ್ ಹರಡಿಲ್ಲ ಎಂದು ಖಾತರಿಯಾದ ಬಳಿಕ ಅವರ ಕುಟುಂಬಗಳಿಗೆ ಕಳಿಸುವಂಥ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಸಾಧ್ಯವೇ?’ಎಂದು ಆ ಪತ್ರಿಕೆ ಪ್ರಶ್ನೆ ಮಾಡಿದೆ.
ಪಾಕಿಸ್ತಾನ ತನ್ನ ವಿದ್ಯಾರ್ಥಿಗಳನ್ನು ವಾಪಾಸ್ ಕರೆಸಿಕೊಳ್ಳಲು ಮುಖ್ಯ ತೊಂದರೆ ಪಾಕಿಸ್ತಾನದಲ್ಲಿ ನಿಗಾ ಘಟಕಗಳ ಸ್ಥಾಪನೆ ಅಸಾಧ್ಯ ಎನಿಸುವಂಥ ಪರಿಸ್ಥಿತಿ ಇರುವುದು ಎಂಬುದು"ಡಾನ್" ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಬೇರೆಯೇ ವಿಷಯವನ್ನು ಹರಡುತ್ತಿದೆ. ಪಾಕ್ ಸರ್ಕಾರಕ್ಕೆ ಚೀನಾದೊಡನೆ ಹಲವು ಒಪ್ಪಂದಗಳಿವೆ. ಒಂದು ರೀತಿಯಲ್ಲಿ ನಾವು ಚೀನಾದ ಹಂಗಿನಲ್ಲಿದ್ದೇವೆ. ಚೀನಾ ಸರ್ಕಾರಕ್ಕೆ ಬೇಸರವಾಗಬಹುದು ಎನ್ನುವ ಕಾರಣದಿಂದಾಗಿ ಪ್ರಧಾನಿ ಇಮ್ರಾನ್ ಖಾನ್ ಚೀನಾದಲ್ಲಿರುವ ಪಾಕಿಸ್ತಾನಿಯರನ್ನು ತ್ಯಜಿಸಿಬಿಟ್ಟಿದ್ದಾರೆ ಎಂದು ಪಾಕಿಸ್ತಾನಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ವೈರಸ್ನಿಂದಾಗಿ ಚೀನಾದಲ್ಲಿ ಶನಿವಾರ ಒಂದು ದಿನದಲ್ಲೇ 45 ದಮಂದಿ ಮೃತಪಟ್ಟಿದ್ದು ಒಟ್ಟು 300 ಕ್ಕೂ ಅಧಿಕ ಜನರು ಕೊರೋನಾ ವೈರಸ್ಗೆ ಬಲಿಯಾಗಿದ್ದಾರೆ.