ನೈರೋಬಿ, ಫೆ.03 (Daijiworld News/PY) : ತಾಂಜಾನಿಯಾದ ಮೋಶಿ ಪಟ್ಟಣದ ಚರ್ಚ್ವೊಂದರಲ್ಲಿ ಫೆ.1 ಶನಿವಾರದಂದು ಮಧ್ಯಾಹ್ನ ಕಾಲ್ತುಳಿತಕ್ಕೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಜಾಸ್ತಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೋಧಕ ಬೋನಿಫೇಸ್ ಮಾಂಪೋಸಾ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತಮ್ಮನ್ನು ಧರ್ಮಪ್ರಚಾರಕ ಎಂದು ಸ್ವಯಂ ಘೋಷಿಸಿಕೊಂಡಿರುವ ಮಾಂಪೋಸಾ, ಈ ಸಂದರ್ಭ ಎಣ್ಣೆಯನ್ನು ನೆಲದ ಮೇಲೆ ಸುರಿದು, ಇದು ಅಭಿಷೇಕದ ಪವಿತ್ರ ಎಣ್ಣೆ. ಇದನ್ನು ಸೇವಿಸಿದರೆ ಹಾಗೂ ಹಚ್ಚಿಕೊಂಡರೆ ಅನಾರೋಗ್ಯದಿಂದ ಬಳಲುತ್ತಿರುವವರು ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.
ಈ ವೇಳೆ ಎಣ್ಣೆ ಪಡೆಯಲು ಜನರು ಮುಗಿಬಿದ್ದ ಕಾರಣ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲೇ 20 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆಯೇ ಮಾಂಪೋಸಾ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆಗೆ ಹಾಜರಾಗಲು ಮಾಂಪೋಸಾ ಅವರಿಗೆ ಸೂಚಿಸಲಾಗಿದೆ. ಮಾಂಪೋಸಾ ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿಲ್ಲ ಎಂದು ತಾಂಜಾನಿಯಾದ ಪೊಲೀಸ್ ಮುಖ್ಯಸ್ಥ ಸೈಮನ್ ಸಿರೊ ಹೇಳಿದ್ದಾರೆ.