ಇಸ್ತಾಂಬುಲ್, ಫೆ 06 (Daijiworld News/MB) : ಇಸ್ತಾಂಬುಲ್ನ ಸಬಿಹಾ ಗೊಕ್ಸೆನ್ ನಿಲ್ದಾಣದಲ್ಲಿ ಪೆಗಾಸಾಸ್ ಏರ್ಲೈನ್ಸ್ನ ವಿಮಾನ ಇಳಿದು ರನ್ವೇನಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಜಾರಿ ಮೂರು ತುಂಡುಗಳಾದ ಘಟನೆ ನಡೆದಿದೆ. ಈ ಅವಘಡದಿಂದಾಗಿ ಮೂವರು ಸಾವನ್ನಪ್ಪಿದ್ದು 179 ಮಂದಿ ಗಾಯಗೊಂಡಿದ್ದಾರೆ.
ವಿಮಾನಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 183 ಮಂದಿಯಿದ್ದು ಎಲ್ಲರನ್ನು ಹೊರ ತೆಗೆಯಲಾಗಿದೆ. ಗಾಯಾಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಉಳಿದ ಗಾಯಾಳುಗಳಿಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ವಿಮಾನ ರನ್ವೇನಲ್ಲಿ ತೇವಾಂಶ ಇದ್ದ ಹಿನ್ನಲೆಯಲ್ಲಿ ವಿಮಾನವು ನಿಲ್ಲದೆ ಜಾರಿ ಸುಮಾರು 50-60 ಮೀಟರ್ ಜಾರಿದೆ. ಈ ಸಂದರ್ಭದಲ್ಲಿ ವಿಮಾನವು ಮೂರು ತುಂಡಾಗಿದ್ದು ಒಂದು ತುಂಡು ಸುಮಾರು 30-40 ಮೀಟರ್ ದೂರಕ್ಕೆ ಸಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಈ ಅವಘಡ ನಡೆದ ಹಿನ್ನಲೆಯಲ್ಲಿ ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.