ವುಹಾನ್, ಫೆ 10 (Daijiworld News/MSP): ಮಾರಣಾಂತಿಕ ಕೊರೊನಾ ವೈರಸ್ ಬಗ್ಗೆ ವರದಿಗೆ ತೆರಳಿದ್ದ ಚೀನಾ ವರದಿಗಾರರಿಬ್ಬರು ನಾಪತ್ತೆಯಾಗಿದ್ದಾರೆ. ಚೀನಾದಲ್ಲಿಏನಾಗುತ್ತಿದೆ ಎಂದು ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿಗೆ ಮಾಹಿತಿ ನೀಡುತ್ತಿದ್ದ ಚೆನ್ ಕಿಯೂಷಿ, ಫಾಂಗ್ ಬಿನ್ ಇಬ್ಬರು ನಾಪತ್ತೆಯಾಗಿದ್ದಾರೆ.
ಇವರು ತಮ್ಮ ಮೊಬೈಲ್ ಫೋನ್ಗಳ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ಸೆರೆಹಿಡಿದು ಟ್ವಿಟ್ಟರ್, ಶೇರ್ಚಾಟ್, ಯೂಟ್ಯೂಬ್ಗಳಲ್ಲಿ ವಿಡಿಯೋಗಳನ್ನು ಶೇರ್ ಮಾಡಿದ್ದರು. ಇದೀಗ ಇವರಿಬ್ಬರು ನಾಪತ್ತೆಯಾಗಿದ್ದಾರೆ. ಚೀನಾ ಸರ್ಕಾರ ಕೊರೊನಾ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಬಹುತೇಕ ಸಾಮಾಜಿಕ ಮಾಧ್ಯಮ ಖಾತೆಗಳು ಸ್ಥಗಿತಗೊಂಡಿದೆ.
ಚೆನ್ ಕಿಯೂಷಿ ಕಳೆದ 20 ಗಂಟೆಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇನ್ನು ಫೆಂಗ್ ಅವರು ಮೌನಕ್ಕೆ ಶರಣಾಗಿದ್ದಾರೆ. ಇವರು ಆಸ್ಪತ್ರೆಯೊಂದರಲ್ಲಿ ಮೃತದೇಹದ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಅಧಿಕಾರಿಗಳು ಬಂಧಿಸಿದ್ದರು.
ವೈರಸ್ ಕುರಿತು ವರದಿ ಮಾಡಿ ಇಡೀ ವಿಶ್ವಕ್ಕೆ ಅಲ್ಲಿನ ಪರಿಸ್ಥಿತಿ ರವಾನಿಸಿದ್ದಕ್ಕಾಗಿ ಅವರನ್ನು ಸರ್ಕಾರ ಬಂಧಿಸಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಅಥವಾ ಇವರಿಗೂ ಸೋಂಕು ತಗುಲಿದೆಯೇ ಎನ್ನುವ ಶಂಕೆ ಕಾಡತೊಡಗಿದೆ.