ವಾಷಿಂಗ್ಟನ್, ಫೆ.11 (DaijiworldNews/PY): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.24 ಹಾಗೂ 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವೈಟ್ಹೌಸ್ ಮಂಗಳವಾರ ಘೋಷಿಸಿದೆ.
ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಫೆ. 24 ರಿಂದ 25ರವರೆಗೆ ಭಾರತಕ್ಕೆ ತೆರಳುತ್ತಿದ್ದು, ಟ್ರಂಪ್ ಅವರ ಈ ಭೇಟಿಯೂ ಅಮೆರಿಕ ಹಾಗೂ ಭಾರತದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ವೈಟ್ಹೌಸ್ ಟ್ವೀಟ್ ಮೂಲಕ ತಿಳಿಸಿದೆ.
ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ವಿಚಾರವಾಗಿ ಭಾರತ ಹಾಗೂ ಅಮೆರಿಕ ದೇಶಗಳು ರಾಜತಾಂತ್ರಿಕ ಸಮಾಲೋಚನೆಯಲ್ಲಿ ತೊಡಗಿವೆ ಎಂಬುದಾಗಿ ಜ.16ರಂದು ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಸಮಾಲೋಚನೆ ಫಲಪ್ರದವಾಗಿದ್ದು, ಟ್ರಂಪ್ ಭಾರತ ಭೇಟಿಯೂ ನಿಗದಿಯಾಗಿದೆ.
ಇದು ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ ಭಾರತಕ್ಕೆ ಕೈಗೊಳ್ಳುತ್ತಿರುವ ಮೊದಲ ಪ್ರವಾಸವಾಗಿದ್ದು, ಈ ಪ್ರವಾಸದಲ್ಲಿ ಟ್ರಂಪ್ ಹಾಗೂ ಅವರ ಪತ್ನಿ ದೆಹಲಿ ಮತ್ತು ಅಹಮದಾಬಾದ್ಗೆ ಭೇಟಿ ಕೊಡಲಿದ್ದಾರೆ.
ಹಿಂದೆ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು 2010 ಹಾಗೂ 2015ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.