ದುಬೈ, ಫೆ 12 (Daijiworld News/MB) : ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಣೆ ಮಾಡಲು ಹೋದ ಭಾರತೀಯ ಮೂಲದ ಯುನೈಟೆಡ್ ಅರಬ್ ಎಮಿರೇಟ್ಸ್ ನ 32 ವರ್ಷದ ಯುವಕನ ದೇಹ ಶೇ.90ರಷ್ಟು ಸುಟ್ಟು ಹೋಗಿರುವ ಘಟನೆ ದುಬೈಯ ಉಮ್ ಅಲ್ ಖ್ವಾವೈನ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಕೇರಳ ಮೂಲದ ಅನಿಲ್ ನಿನಾನ್ (32) ಎಂಬ ವ್ಯಕ್ತಿಯ ದೇಹ ಶೇ.90ರಷ್ಟು ಸುಟ್ಟು ಹೋಗಿದ್ದು ಅಬುಧಾಬಿಯ ಮಾಪ್ರಾಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರೆ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.
ಅನಿಲ್ ಅವರ ಪತ್ನಿಯನ್ನು ಕೂಡಾ ಮಾಪ್ರಾಖ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಆಕೆಯ ದೇಹವು ಶೇ. 10ರಷ್ಟು ಮಾತ್ರ ಸುಟ್ಟು ಹೋಗಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ. ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ವರದಿ ತಿಳಿಸಿದೆ.
ಬೆಂಕಿಯು ಉಮ್ ಅಲ್ ಖ್ವಾವೈನ್ ಅಪಾರ್ಟ್ ಮೆಂಟ್ ನ ಕಾರಿಡಾರ್ ನಲ್ಲಿದ್ದ ಎಲೆಕ್ಟ್ರಿಕ್ ಬಾಕ್ಸ್ ನಲ್ಲಿ ಸೋಮವಾರ ರಾತ್ರಿಯಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.
ಪತ್ನಿಗೆ ಬೆಂಕಿ ತಗಲಿದ್ದನ್ನು ಕಂಡ ಪತಿಯು ಆಕೆಯನ್ನು ರಕ್ಷಣೆ ಮಾಡಲು ಹೋಗಿ ಆತನ ದೇಹವೇ ಶೇ.90ರಷ್ಟು ಸುಟ್ಟುಹೋಗಿದ್ದು ಸೋಮವಾರ ರಾತ್ರಿಯೇ ಈ ದಂಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.