ಕಾಠ್ಮಂಡು, ಫೆ 13 (Daijiworld News/MB) : ಭಾರತದ ಕೇರಳ ಮೂಲದವರಾದ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಪ್ರವಾಸಿಗರ ಸಾವಿಗೆ ಕಾರಣವಾದ ರೆಸಾರ್ಟ್ಗೆ ನೀಡಲಾಗಿದ್ದ ಪರವಾನಗಿಯನ್ನು ನೇಪಾಳ ಸರಕಾರ ರದ್ದುಗೊಳಿಸಿದೆ.
ಜ.21ರಂದು ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್ನಲ್ಲಿ ಕೇರಳದಿಂದ ಪ್ರವಾಸಕ್ಕೆ ಆಗಮಿಸಿದ್ದ 15 ಮಂದಿ ತಂಗಿದ್ದು ಆ ಪೈಕಿ ನಾಲ್ವರು ಮಕ್ಕಳು ಸೇರಿದಂತೆ 8 ಮಂದಿ ಅನಿಲ ಸೋರಿಕೆಯಿಂದಾಗಿ ಮೃತಪಟ್ಟಿದ್ದರು.
ಈ ಪ್ರಕರಣದ ತನಿಖೆ ನಡೆಸಿದ್ದ ಸಮಿತಿ "ರೆಸಾರ್ಟ್ನಲ್ಲಿ ಭದ್ರತೆ ಮತ್ತು ನಿರ್ವಹಣ ವ್ಯವಸ್ಥೆ ಸಮರ್ಪಕವಾಗಿಲ್ಲದ್ದೇ ದುರಂತಕ್ಕೆ ಕಾರಣ. ಜತೆಗೆ ಯಾವುದೇ ಸುರಕ್ಷತಾ ಕ್ರಮಗಳೂ ಅಲ್ಲಿ ಇರಲಿಲ್ಲ" ಎಂದು ವರದಿ ನೀಡಿತ್ತು.
ಕೇರಳದಿಂದ 15 ಮಂದಿಯ ತಂಡ ಪೋಖ್ರಾ ಪರ್ವತಕ್ಕೆ ಪ್ರವಾಸ ತೆರಳಿದ್ದು ಹಿಂದಕ್ಕೆ ಬರುವ ಸಂದರ್ಭದಲ್ಲಿ ಸೋಮವಾರ ರಾತ್ರಿ ಮಕವಾನ್ಪುರ ಜಿಲ್ಲೆಯ ದಮನ್ನಲ್ಲಿರುವ ಎವರೆಸ್ಟ್ ಪನೋರಮಾ ರೆಸಾರ್ಟ್ನಲ್ಲಿ ತಂಗಿದ್ದರು.
ಈ ಕುರಿತು ಹೇಳಿಕೆ ನೀಡಿದ್ದ ರೆಸಾರ್ಟ್ ಮ್ಯಾನೇಜರ್, "ಪ್ರವಾಸಿಗರು ತಂಗಿರುವ ಕೊಠಡಿಗಳು ಬೆಚ್ಚಗಿರಲಿ ಎಂದು ಗ್ಯಾಸ್ ಹೀಟರ್ ಆನ್ ಮಾಡಿದ್ದರು. ಅವರು ಒಟ್ಟು ನಾಲ್ಕು ಕೊಠಡಿಗಳನ್ನು ಬುಕ್ ಮಾಡಿದ್ದು 15 ಮಂದಿಯ ಪೈಕಿ ಎಂಟು ಮಂದಿ ಒಂದು ಕೊಠಡಿಯಲ್ಲಿ ತಂಗಿದ್ದು, ಉಳಿದವರು ಇನ್ನೊಂದು ಕೊಠಡಿಯಲ್ಲಿದ್ದರು. ಹಾಗೆಯೇ ಕೊಠಡಿಯ ಎಲ್ಲಾ ಕಿಟಕಿ ಬಾಗಿಲುಗಳ ಚಿಲಕವನ್ನು ಒಳಗಿನಿಂದ ಹಾಕಲಾಗಿತ್ತು" ಎಂದು ಹೇಳಿದ್ದರು.