ಬಾಂಗ್ಲಾದೇಶ, ಫೆ.19 (DaijiworldNews/PY): ಪುರುಷರ ಅಸಹಜ ಸಾವಿಗೆ ಅವರ ಪತ್ನಿಯರ ಮೂಲಕ ಒದಗಿದ ದುರದೃಷ್ಟವೇ ಕಾರಣ ಎಂಬ ಮೂಢನಂಬಿಕೆ ಬಾಂಗ್ಲಾದೇಶದ ಗ್ರಾಮೀಣ ಭಾಗದಲ್ಲಿದೆ.
ಇಲ್ಲಿನ ರಷೀದಾ ಅವರ ಪತಿಯು ಜೇನು ಸಂಗ್ರಹಕ್ಕಾಗಿ ಕಾಡಿಗೆ ಹೋದಾಗ ಹುಲಿ ದಾಳಿಗೆ ತುತ್ತಾಗಿದ್ದರು. ಈ ಕಾರಣದಿಂದ ರಷೀದಾ ಅವರನ್ನು ಸಮಾಜದಿಂದ ಬಹಿಷ್ಕಾರ ಹಾಕಲಾಗಿದ್ದು, ಅವರ ಮಕ್ಕಳೇ ಅವರನ್ನು ಮಾಟಗಾತಿ ಎಂದು ಹೀಯಾಳಿಸುತ್ತಿದ್ದಾರೆ.
ಪುರುಷರ ಅಸಹಜ ಸಾವಿಗೆ ಅವರ ಪತ್ನಿಯರ ಮೂಲಕ ಒದಗಿದ ದುರದೃಷ್ಟವೇ ಕಾರಣ ಎಂದು ಸಮಾಜದಿಂದ ಬಹಿಷ್ಕಾರ ಹಾಕಲಾಗುತ್ತದೆ. ನಾನೊಬ್ಬ ಮಾಟಗಾತಿ ಎಂದು ನನ್ನ ಮಕ್ಕಳೇ ನನ್ನನ್ನು ಹೀಯಾಳಿಸಿದರು ಎಂದು ರಷೀದಾ ಕಣ್ಣೀರು ಹಾಕುತ್ತಾ ಹೇಳುತ್ತಾರೆ. ಅಲ್ಲದೇ ಜನ್ಮಕೊಟ್ಟ ಮಕ್ಕಳಿಂದಲೇ ಇವರೀಗ ಪರಿತ್ಯಕ್ತೆ. ಅವರನ್ನು ನೆರಹೊರೆಯವರೂ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ.
ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಹರಡಿಕೊಂಡಿರುವ ಸುಂದರಬನ ಕಾಡಿನ ಅಂಚಿನಲ್ಲಿರುವ ಗಬುರಾ ಎಂಬ ಹಳ್ಳಿ ಮಸಮ್ಮತ್ ರಷೀದಾ ಅವರ ಊರು. ಜೇನು ಸಂಗ್ರಹ ಈ ಹಳ್ಳಿಯ ಪ್ರತಿ ಕುಟುಂಬದ ಪ್ರಮುಖ ವೃತ್ತಿ.
ಸುಂದರಬನದ ನೈಋತ್ಯ ಪ್ರದೇಶದಲ್ಲಿ ಜೇನು ಚೆನ್ನಾಗಿ ದೊರಕುತ್ತದೆ ಎಂದು ಬಹುತೇಕ ಸಂಗ್ರಹಕಾರರು ಆ ಕಡೆಗೆ ಹೋಗುವುದು ರೂಢಿ. ಆದರೆ, ಅದೇ ಭಾಗದಲ್ಲಿ ನರಭಕ್ಷಕ ಹುಲಿಗಳು ಅಧಿಕವಾಗಿರುತ್ತದೆ ಎನ್ನುತ್ತಾರೆ ಜಹಂಗೀರ್ನಗರ ವಿಶ್ವವಿದ್ಯಾಲಯದ ಹುಲಿತಜ್ಞ ಮುನೀರುಲ್ ಖಾನ್.
ಹವಾಮಾನ ಬದಲಾವಣೆ, ಕಾಡಿನಲ್ಲಿ ಹೆಚ್ಚಿರುವ ಮಾನವನ ಚಟುವಟಿಕೆಗಳ ಕಾರಣದಿಂದ ಹುಲಿಗಳ ಆವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಆಹಾರಕ್ಕಾಗಿ ಅವುಗಳು ಹಳ್ಳಿಗಳತ್ತ ಬರಲು ಆರಂಭಿಸಿವೆ. ಹುಲಿಗಳೂ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿವೆ. ಬಾಂಗ್ಲಾದೇಶದ ಸರಹದ್ದಿನಲ್ಲಿರುವ ಸುಂದರಬನ ಅರಣ್ಯ ಪ್ರದೇಶದಲ್ಲಿ ಸುಮಾರು ನೂರು ಹುಲಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.
2001 ರಿಂದ 2011ರ ಅವಧಿಯಲ್ಲಿ ಸುಮಾರು 50 ಹಳ್ಳಿಗಳಲ್ಲಿ ನರಭಕ್ಷಕಗಳು ನಡೆಸಿದ ದಾಳಿಗೆ 519 ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪತ್ನಿಯರೆಲ್ಲ ವಿಧವೆಯರಾಗಿ ಈಗ ನರಕಸದೃಶ ಬದುಕು ಸಾಗಿಸುವಂತಾಗಿದೆ. ಅವರೊಂದು ಗೌರವದ ಬದುಕು ಕಂಡುಕೊಳ್ಳಲು ಹಲವು ಸ್ವಯಂಸೇವಾ ಸಂಸ್ಥೆಗಳು ನೆರವಿನ ಹಸ್ತ ಚಾಚುತ್ತಿವೆ.
ರಜಿಯಾ ಖಾತೂನ್ ಅವರು15 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಾರೆ. ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದರೂ ಸಂಬಂಧಿಕರಿಂದ ಅವರಿಗೆ ಗುಟ್ಟಾಗಿ ನೆರವು ದೊರೆತಿದೆ.
ಪತಿಯ ಸಾವಿಗೆ ನನ್ನನ್ನೇ ದೂಷಿಸಲು ಆರಂಭಿಸಿದಾಗ ನನಗೆ ತುಂಬಾ ನೋವಾಗಿತ್ತು. ನನ್ನದೇನು ತಪ್ಪಿದೆ ಎಂದು ನನಗೆ ಈಗಲೂ ತಿಳಿದಿಲ್ಲ. ಈ 15 ವರ್ಷಗಳಲ್ಲಿ ಪ್ರತಿಕೂಲ ಸನ್ನಿವೇಶಗಳ ನಡುವೆ ಜೀವನ ನಡೆಸುವುದು ಅಭ್ಯಾಸವಾಗಿದೆ. ಸಂಬಂಧಿಗಳ ಸಹಕಾರ ದೊರೆತಿದೆ ಎಂದು ಅವರು ಹೇಳುತ್ತಾರೆ.